ಕಾರವಾರ: ವಂದೇ ಭಾರತ್ ರೈಲು ಸ್ವಾಗತ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಬೆಂಬಲಿಗರು ಕಿತ್ತಾಡಿಕೊಂಡ ಘಟನೆ ಶನಿವಾರ ನಡೆಯಿತು. ಕಾರ್ಯಕ್ರಮಕ್ಕೆ ರೂಪಾಲಿ ನಾಯ್ಕ ಆಗಮಿಸಿದ್ದ ವೇಳೆ ಕಾರ್ಯಕರ್ತರು ಅರ್ಧ ಗಂಟೆಗೂ ಹೆಚ್ಚು ಕಾಲ ಘೋಷಣೆಗಳನ್ನು ಕೂಗಿದರು. ಬಳಿಕ ಶಾಸಕ ಸತೀಶ್ ಸೈಲ್ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಸ್ಥಳದಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಅಧಿಕಾರಿಗಳು ರಾಜಕೀಯ ಮಾಡದಂತೆ ಮುಖಂಡರಿಗೆ ಮನವಿ ಮಾಡಿದರಾದರೂ ಪ್ರಯೋಜನವಾಗದ ಕಾರಣ ಕಾರ್ಯಕ್ರಮ ಅರ್ಧದಲ್ಲಿಯೇ ಸ್ಥಗಿತಗೊಂಡಿತು.
ಕಾರ್ಯಕರ್ತರಿಗೆ ಜಿ.ಪಂ ಸಿಇಒ ಈಶ್ವರಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದರೂ ಫಲ ನೀಡಲಿಲ್ಲ. ಇಬ್ಬರು ನಾಯಕರು ಬೆಂಬಲಿಗರೊಂದಿಗೆ ರೈಲು ಹತ್ತಿ ಪ್ರಯಾಣಿಕರಿಗೆ ಶುಭ ಕೋರಿದರು. ಈ ವೇಳೆಯೂ ಬೆಂಬಲಿಗರ ಘೋಷಣೆ ಮುಂದುವರೆದಿದ್ದರಿಂದ ಪ್ರಯಾಣಿಕರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳು ವಾಪಸ್ ತೆರಳುವಂತಾಯಿತು.
ಬಳಿಕ ಮಾತನಾಡಿದ ಶಾಸಕ ಸತೀಶ್ ಸೈಲ್, "ಬಿಜೆಪಿಯವರು ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಶಾಲು ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆ ಜಾರಿಗೊಳಿಸಿದ್ದಾರೆ. ಇದಕ್ಕೆ ನಾನು ಪ್ರಧಾನಿಯವರನ್ನು ಅಭಿನಂದಿಸುತ್ತೇನೆ. ಬಿಜೆಪಿಗರು ಈ ರೀತಿ ರಾಜಕೀಯ ಮಾಡುವ ಬದಲು ಕೊಂಕಣ ರೈಲ್ವೆ ನಿರಾಶ್ರಿತರಿಗೆ 30 ವರ್ಷದಿಂದ ಪರಿಹಾರ ಬಂದಿಲ್ಲ, ಅದನ್ನು ಕೊಡಿಸಲು ಪ್ರಯತ್ನಿಸಲಿ. ಅಲ್ಲದೇ, ಮುರುಡೇಶ್ವರದವರೆಗೆ ಮಾತ್ರ ಬರುವ ರೈಲನ್ನು ಕಾರವಾರದವರೆಗೆ ತರಲು ಪ್ರಯತ್ನಿಸಬೇಕು" ಎಂದು ಆಗ್ರಹಿಸಿದರು.
ಸಂಸದ ಅನಂತಕುಮಾರ್ ಹೆಗಡೆ ಗೈರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕಾರವಾರದಲ್ಲಿ ಚಾಲನೆ ನೀಡಬೇಕಿದ್ದ ಸಂಸದ ಅನಂತಕುಮಾರ್ ಹೆಗಡೆ ಗೈರಾಗಿದ್ದರು. ಅವರು ಬೇರೊಂದು ಕಾರ್ಯಕ್ರಮವಿದ್ದ ಕಾರಣಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸ್ಥಳೀಯ ಹಾಲಿ ಶಾಸಕ ಸತೀಶ್ ಸೈಲ್ ರೈಲಿಗೆ ಹಸಿರು ನಿಶಾನೆ ತೋರಿದರು. ಇದಕ್ಕೂ ಮುನ್ನ ಅವರು ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಿಹಿ ವಿತರಿಸಿ ಶುಭ ಕೋರಿದರು. ಅಲ್ಲದೆ, ಮಂಗಳೂರಿನಿಂದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ರೈಲಿನಲ್ಲಿಯೇ ಪಕ್ಷದ ಕಾರ್ಯಕರ್ತರು, ಪ್ರಯಾಣಿಕರೊಂದಿಗೆ ಸಂಚರಿಸಿದರು. ರೈಲು ಗೋವಾಕ್ಕೆ ಸಂಚರಿಸಿತು.
ರೈಲಿನಲ್ಲಿರುವ ಸೌಕರ್ಯಗಳು: ವೇಗದ ಲಕ್ಸುರಿ ರೈಲಿನಲ್ಲಿ ನೂರಾರು ಮಂದಿ ಸಂಚರಿಸಿ ಸಂಭ್ರಮಿಸಿದರು. 8 ಬೋಗಿಗಳನ್ನು ಒಳಗೊಂಡ 560 ಆಸನ ವ್ಯವಸ್ಥೆ ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಹೊರತುಪಡಿಸಿ ವಾರದಲ್ಲಿ 6 ದಿನವೂ ಸಂಚರಿಸಲಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ಬೋಗಿಗಳಲ್ಲಿ ಬಾಗಿಲುಗಳು ಸ್ವಯಂ ಚಾಲಿತವಾಗಿವೆ. ಆನ್ಬೋರ್ಡ್ ವೈಫೈ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ಮೋಕ್ ಅಲರ್ಟ್, ಸಿಸಿಟಿವಿಗಳು ಕೂಡ ಬೋಗಿಗಳಲ್ಲಿದೆ. ಅತ್ಯಾಧುನಿಕ ಆಸನದ ವ್ಯವಸ್ಥೆಯೊಂದಿಗೆ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರ ಲಭ್ಯವಿದೆ. ವಿಮಾನದ ಮಾದರಿಯಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ರೈಲಿನಲ್ಲಿ ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಎರಡೂ ಕಡೆ ಎಂಜಿನ್ ಇರುವುದರಿಂದ ದಿಕ್ಕು ಬದಲಿಸದೇ ರೈಲು ಸಂಚರಿಸುತ್ತದೆ.
ರೈಲಿನ ವೇಳಾಪಟ್ಟಿ: ಈ ರೈಲು ಪ್ರತಿದಿನ ಬೆಳಿಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ಬಿಡಲಿದ್ದು, 9.50ಕ್ಕೆ ಉಡುಪಿ, 12.10ಕ್ಕೆ ಕಾರವಾರ ಹಾಗೂ 1.05 ಮಡಗಾಂವ್ ತಲುಪಲಿದೆ. ಮಡಗಾಂವ್ನಿಂದ ಸಾಯಂಕಾಲ 6.10ಕ್ಕೆ ಬಿಡಲಿರುವ ರೈಲು 6.57ಕ್ಕೆ ಕಾರವಾರ, 9.14ಕ್ಕೆ ಉಡುಪಿ, 10.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪುತ್ತದೆ.
ಇದನ್ನೂ ಓದಿ: ಮಂಗಳೂರು ಮಡಗಾಂವ್ ನಡುವೆ ವಂದೇ ಭಾರತ್ ರೈಲು ಆರಂಭ; ಪ್ರಯಾಣಿಕರಿಗೆ ಸಂತಸ
ಮೊದಲ ದಿನ ರೈಲ್ವೆ ಇಲಾಖೆಯು ಪಾಸ್ ಪಡೆದವರಿಗೆ ಉಚಿತವಾಗಿ ಹೋಗಿ ಬರಲು ಅವಕಾಶ ಕಲ್ಪಿಸಲಾಗಿತ್ತು. ಇದಲ್ಲದೆ, ಪಕ್ಷದ ಮುಖಂಡರುಗಳು ಸೇರಿದಂತೆ ಮಂಗಳೂರು, ಉಡುಪಿ ಹಾಗೂ ಕಾರವಾರದಿಂದ ನೂರಾರು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಪ್ರಯಾಣಿಕರ ಪ್ರತಿಕ್ರಿಯೆ: "ಅತ್ಯಾಧುನಿಕ ಸೌಲಭ್ಯ ಹೊಂದಿರುವ ರೈಲಿನಲ್ಲಿ ಸಂಚರಿಸುವುದೇ ಒಂದು ಖುಷಿ. ಇದಕ್ಕಾಗಿ ನಾವು ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಇಂತಹ ಸೌಲಭ್ಯಗಳನ್ನು ಕಲ್ಪಿಸಬೇಕು. ಜನಸಾಮಾನ್ಯರು ಕೂಡ ರೈಲಿನಲ್ಲಿ ಶುಚಿತ್ವ ಕಾಪಾಡಬೇಕು" ಎಂದು ಪ್ರಯಾಣಿಕ ರೂಪಾಶ್ರೀ ಮನವಿ ಮಾಡಿದರು.