ಭಟ್ಕಳ(ಕಾರವಾರ): ಕರ್ನಾಟಕ ವಿಧಾನ ಸಭಾ ಚುನಾವಣೆ-2023 ರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮ ದೇಶದ 7ನೇ ಅದ್ಭುತ ಪಾರಂಪರಿಕ ಸ್ಥಳಗಳಲ್ಲೊಂದಾದ ನೇತ್ರಾಣಿ ನಡುಗುಡ್ಡೆಯಲ್ಲಿ ಸ್ಕೂಬಾ ಡೈವಿಂಗ್ ನಡೆಸುವ ಮೂಲಕ ಗಮನ ಸೆಳೆಯಲಾಯಿತು.
ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಭಟ್ಕಳ, ಮಾವಳ್ಳಿ-1 ಹಾಗೂ ಮಾವಳ್ಳಿ-2 ಗ್ರಾಮ ಪಂಚಾಯತ್ ಮತ್ತು ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್ರವರ ಸಹಯೋಗದಲ್ಲಿ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಕಾರ್ಯಕ್ರಮ ನಡೆಯಿತು. ಸ್ಥಳೀಯರು ಮತ್ತು ಕಚೇರಿ ಸಿಬ್ಬಂದಿಗಳೊಂದಿಗೆ ನೇತ್ರಾಣಿ ನಡುಗುಡ್ಡೆಗೆ ತೆರಳಿ, ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಲ್ಲಿನ ಅಮೂಲ್ಯ, ಅಪರೂಪದ ಹವಳ, ಜಲ - ಚರಗಳ ನಡುವೆ ಜಾಗೃತಿ ಭಿತ್ತಿ ಪತ್ರ ಪ್ರದರ್ಶಿಸಿ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನ್ಮನೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ನಾಗರಾಜ ನಾಯ್ಕ, ಗ್ರಾಮ ಪಂಚಾಯತ ಕಾರ್ಯದರ್ಶಿ ಮಾರುತಿ ದೇವಾಡಿಗ ಹಾಗೂ ಸಿಬ್ಬಂದಿ, ಸ್ಕೂಬಾ ಡೈವಿಂಗ್ ಅಡ್ವೆಂಚರ್ ಕ್ಲಬ್ ಸಿಬ್ಬಂದಿ ಹಾಜರಿದ್ದರು.
ಬೆಂಗಳೂರು ಜನತೆಗೆ ತುಷಾರ್ ಗಿರಿನಾಥ್ರಿಂದ ಮತದಾನನದ ಅರಿವು: ಪ್ರಜಾಪ್ರಭುತ್ವದ ಮತದಾನೋತ್ಸವ ದಿನವಾದ ಮೇ 10 ರಂದು ಎಲ್ಲ ಯುವ ಮತದಾರರು ತಪ್ಪದೇ ಮತದಾನ ಮಾಡಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲ್ಲ ವಿದ್ಯಾರ್ಥಿಗಳಲ್ಲಿ ಕೋರಿದರು. ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಜಯನಗರ 4ನೇ ಬ್ಲಾಕ್ನಲ್ಲಿರುವ ವಿಜಯ ಕಾಲೇಜಿನಲ್ಲಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮೊದಲನೇ ಬಾರಿ ಮತ ಚಲಾಯಿಸುವವರಲ್ಲಿ ಮತದಾನ ಮಾಡಬೇಕೆಂಬ ಉತ್ಸಾಹ ಸಾಕಷ್ಟಿರಲಿದ್ದು, ತಾವು ಮತದಾನ ಮಾಡುವ ಜೊತೆಗೆ ಬೇರೆಯವರಿಂದಲೂ ಮತದಾನ ಮಾಡಿಸಬೇಕೆಂದು ತಿಳಿಸಿದರು.
ಯಾರ‍್ಯಾರು ಮೊದಲನೇ ಬಾರಿ ಮತದಾನ ಮಾಡುತ್ತಿದ್ದೀರಾ ಅವರೆಲ್ಲರೂ ರಾಯಭಾರಿಗಳಾಗಿ ತಮ್ಮ ಮನೆಯವರಿಗೆ ಮಾತ್ರವಲ್ಲದೇ ಅಕ್ಕ ಪಕ್ಕದ ಮನೆಯವರಿಗೆ ತಪ್ಪದೆ ಮತದಾನದ ಮಾಡಲು ಅರಿವು ಮೂಡಿಸಲು ವಿದ್ಯಾರ್ಥಿಗಳಲ್ಲಿ ಕೋರಿದರು. ಬೆಂಗಳೂರು ನಗರದಲ್ಲಿ ಶೇ. 52 ರಷ್ಟು ಮಾತ್ರ ಮತದಾನವಾಗುತ್ತಿದ್ದು, ಅದನ್ನು ಶೇ. 75ಕ್ಕೆ ಹೆಚ್ಚಿಸಲು ಭಾರತ ಚುನಾವಣಾ ಆಯೋಗ, ಬಿಬಿಎಂಪಿ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಯುವ ಮತದಾರರು ತಮ್ಮ ವಿವೇಚನೆ ಹಾಗೂ ಮಾನದಂಡದ ಪ್ರಕಾರ ಸರಿಯಾದ ಅಭ್ಯರ್ಥಿಗೆ ಮತದಾನ ಮಾಡಿ. ಒಂದು ಮತವನ್ನು ಕೂಡಾ ನಾವು ಕಡೆಗಣಿಸುವಂತಿಲ್ಲ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಲು ತಿಳಿಸಿದರು. ಮತದಾನ ಮಾಡದಿದ್ದರೆ ಉತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯವಿಲ್ಲ. ನಾವು ನಮ್ಮ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದರೆ ಸರಿಯಾದ ಅಭ್ಯರ್ಥಿಗೆ ಮತ ಚಾಲಾಯಿಸಿ ಗೆಲ್ಲಿಸಬೇಕು. ಜೊತೆಗೆ ಮನೆಯವರಿಗೂ ಉತ್ತಮ ಅಭ್ಯರ್ಥಿಗೆ ಮತಚಲಾಯಿಸುವಂತೆ ಮನವರಿಕೆ ಮಾಡಬೇಕೆಂದು ಹೇಳಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ದೂರು ದಾಖಲಿಸಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀವು ವಾಸಿಸುವ ಸ್ಥಳದಲ್ಲಿ ಏನಾದರು ಅಕ್ರಮ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಿ ವಿಜಿಲ್ ತಂತ್ರಾಂಶದಲ್ಲಿ ಭಾವಚಿತ್ರ ಹಾಗೂ ವಿಡಿಯೋ ಮೂಲಕ ದೂರು ದಾಖಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗದಿದ್ದು, ಎಲ್ಲರೂ ಯೋಚಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಅದೆಲ್ಲವೂ ಎಲ್ಲರೂ ಮತ ಚಲಾಯಿಸುವುದರಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಸರಿಯಾದ ದಿಕ್ಕಿನಲ್ಲಿ ನಡೆಸುವಂತಹ ಅಭ್ಯರ್ಥಿಯನ್ನು ನಾವು ಆಯ್ಕೆ ಮಾಡಬೇಕಿದೆ. ಅದು ಸಾಧ್ಯವಾಗಬೇಕಾದರೆ ಎಲ್ಲರೂ ತಪ್ಪದೆ ಮತದಾನ ಚಲಾಯಿಸಬೇಕು. ಹಣ ಅಥವಾ ಬೇರೆ ಆಮೀಷಗಳಿಗೆ ಒಳಗಾಗದೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ ಹಾಕಬೇಕು ಎಂದು ತಿಳಿಸಿದರು.
ಇದನ್ನೂ ಓದಿ: 16 ಕ್ಷೇತ್ರಗಳಲ್ಲಿ 16ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧೆ: ಆ ಕ್ಷೇತ್ರಗಳಲ್ಲಿ ಎರಡೆರಡು ಮತಯಂತ್ರ ಬಳಕೆ