ಭಟ್ಕಳ(ಉತ್ತರ ಕನ್ನಡ): ಆರೋಗ್ಯದಲ್ಲಿ ಏರುಪೇರು ಹೆಚ್ಚಾದಾಗ ಆಸ್ಪತ್ರೆಗೆ ಬರುವದಕ್ಕಿಂತ ಅನಾರೋಗ್ಯದ ಲಕ್ಷಣಗಳು ಚಿಕ್ಕದಾಗಿರುವ ಸಮಯದಲ್ಲೇ ತಾಲೂಕು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಅವರಿಂದ ಔಷಧೋಪಚಾರ ಮಾಡಿಸಿಕೊಳ್ಳಬೇಕು. ಇದರಿಂದ ತಾಲುಕು ತಾಲೂಕಾಡಳಿತಕ್ಕೆ ಸಹಕಾರವಾಗಲಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ಮನವಿ ಮಾಡಿದ್ದಾರೆ.
ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕಾಡಳಿತದಿಂದ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ವಿವರಣೆ ನೀಡಿದ್ದು, ಜನರೇ ಮುಂದೆ ಬಂದು ತಮಗಿರುವ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಪರಿಸ್ಥಿತಿ ಕೈ ಮೀರುವುದರೊಳಗೆ ವೈದ್ಯರನ್ನು ಸಂಪರ್ಕಿಸಬೇಕು. ಮನೆಯಲ್ಲಿ ತಾವೇ ಯಾವುದೋ ಔಷಧಿ ಪಡೆದು ಕಡಿಮೆಯಾಯಿತು ಎಂದುಕೊಳ್ಳುವ ಬದಲು ತಾಲೂಕು ಆಸ್ಪತ್ರೆಯ ಫೀವರ್ ಕ್ಲಿನಿಕ್ಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಆರೋಗ್ಯದ ಸ್ಥಿತಿ ಕೊನೆಯ ಹಂತದಲ್ಲಿರುವಾಗ ವೈದ್ಯರು ಏನೇ ಪ್ರಯತ್ನ ಪಟ್ಟರೂ ಅದು ಸಫಲವಾಗುವುದಿಲ್ಲ. ಕೋವಿಡ್ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಇರುವ ಮಾಹಿತಿ ನಿಮಗೆ ದೊರೆತರೆ ಸ್ವತಃ ನೀವೇ ಮುಂದೆ ಬಂದು ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಿ ಕ್ವಾರಂಟೈನ್ಗೊಳಗಾದರೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯ ಎಂದರು.
ಭಟ್ಕಳ ಎಎಸ್‌ಪಿ ನಿಖಿಲ್ ಬಿ. ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಜಾರಿಗೆ ತರಲಾದ ಲಾಕ್ಡೌನ್ ಕಟ್ಟುನಿಟ್ಟಿನದಾಗಿದ್ದು, ಜನರ ಓಡಾಟ ಸಂಪೂರ್ಣ ಬಂದ್ ಮಾಡುವ ಉದ್ದೇಶವಿದೆ. ಆದರೆ ಸಾರ್ವಜನಿಕರು ಮಾತ್ರ ಪ್ರತಿ ದಿನ ಇದರ ಉಲ್ಲಂಘನೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕಾನುನು ಕ್ರಮ ಕೈಗೊಳ್ಳಲಿದ್ದೇವೆ ಎಂದರು.