ಕಾರವಾರ: ಕರಾವಳಿಯಾದ್ಯಂತ ಮಳೆಯಾಗುತ್ತಿರುವ ಪರಿಣಾಮ ಕಡಲು ಉಕ್ಕೇರಿದ್ದು, ಅಲೆಗಳ ರಭಸಕ್ಕೆ ರಸ್ತೆಯೇ ಕೊಚ್ಚಿಹೋಗುವ ಆತಂಕ ಇದೀಗ ಕಾರವಾರ ತಾಲೂಕಿನ ದಾಂಡೇಭಾಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎದುರಾಗಿದೆ.
ತಾಲೂಕಿನ ಗೋವಾ-ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಭಾಗದಿಂದ ಗಾಬಿತವಾಡದವರೆಗೆ ಅಲೆಗಳ ಅಬ್ಬರ ಜೋರಾಗಿದೆ. ದಡಕ್ಕೆ ಆಳೆತ್ತರದ ಅಲೆಗಳು ಅಪ್ಪಳಿಸುತ್ತಿವೆ. ಆದರೆ ಈ ಪ್ರದೇಶದ ಸಮುದ್ರದಂಚಿನಲ್ಲಿ ಕೆಲವೆಡೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ತಡೆಗೋಡೆ ನಿರ್ಮಿಸದ ಪ್ರದೇಶಗಳಲ್ಲಿ ಕಡಲ್ಕೊರೆತದ ಭೀತಿ ಪ್ರತಿ ವರ್ಷವೂ ಹೆಚ್ಚುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಅಲ್ಲದೆ ಈ ಬಾರಿ ಈಗಾಗಲೇ ಕಡಲ್ಕೊರೆತ ಆರಂಭವಾಗಿದ್ದು, ಮುಂಜಾಗೃತ ಕ್ರಮವಾಗಿ ಕಡಲ್ಕೊರೆತ ತಡೆಗಟ್ಟಲು ಕ್ರಮವಹಿಸದೇ ಇದ್ದಲ್ಲಿ ಕಾರವಾರದಿಂದ ಗಾಬೀತವಾಡದವರೆಗೆ ಸಾವಿರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಡಾಂಬರು ಹಾಕಿದ ಹೆದ್ದಾರಿ ಸಮುದ್ರಪಾಲಾಗಲಿದೆ ಎನ್ನುತ್ತಾರೆ ಸ್ಥಳೀಯರು.
ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ವಿಪರೀತ ಕಡಲ್ಕೊರತೆ ಉಂಟಾಗಿದ್ದು, ರಸ್ತೆಯೇ ಕೊಚ್ಚಿಹೋಗುವ ಆತಂಕ ಇದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ರಸ್ತೆ ಸಂಪರ್ಕ ಉಳಿಸುವ ಸಲುವಾಗಿಯಾದರೂ ಈ ಭಾಗದಲ್ಲಿ ಸಮುದ್ರದಂಚಿನಲ್ಲಿ ತಡೆಗೋಡೆ ನಿರ್ಮಿಸಬೇಕು ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣಾ ಮೆಹ್ತಾ.
ಇನ್ನು ಗ್ರಾಮಸ್ಥರ ದೂರಿನ ಮೇರೆಗೆ ಬಂದರು ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ತಡೆಗೋಡೆ ನಿರ್ಮಾಣ ಸಂಬಂಧ ಪ್ರಯತ್ನಿಸಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.