ಶಿರಸಿ: ಕಳೆದ ನಾಲ್ಕು ದಿನಗಳ ಹಿಂದೆ ಯಲ್ಲಾಪುರದ ಮದ್ನೂರು ಗ್ರಾಮ ಪಂಚಾಯತ ಚುನಾವಣೆಯ ಹಿನ್ನೆಲೆಯಲ್ಲಿ, ಕಲಘಟಗಿಯಲ್ಲಿ ನಡೆದ ಮಾರಾಮಾರಿ ಪ್ರಕರಣದಲ್ಲಿ ಯಲ್ಲಾಪುರ ಬಿಜೆಪಿ ಮುಖಂಡ ವಿಜಯ್ ಮಿರಾಶಿಯನ್ನು ಆರೋಪಿಯನ್ನಾಗಿಸಿದ್ದರ ವಿರುದ್ಧ ಅವರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಯಲ್ಲಾಪುರದ ಕಿರವತ್ತಿಯಲ್ಲಿ ವಿಜಯ್ ಮಿರಾಶಿ ಅಭಿಮಾನಿಗಳಿಂದ ಪ್ರತಿಭಟನೆ ನಡೆದಿದೆ. ಮದ್ನೂರು ಗ್ರಾಮ ಪಂಚಾಯತ್ ನೂತನ ಸದಸ್ಯರ ನಡುವೆ ಇತ್ತೀಚೆಗೆ ಮಾರಾಮಾರಿ ನಡೆದಿತ್ತು. ಧಾರವಾಡದ ಕಲಘಟಗಿಯ ಡಾಬಾದಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದರು. ಹೊಡೆದಾಟದಲ್ಲಿ 5ಕ್ಕೂ ಹೆಚ್ಚು ಸದಸ್ಯರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ಗಾಯಾಳುಗಳು ವಿಜಯ್ ಮಿರಾಶಿ ಹಾಗೂ ಅವರ ಜತೆಗಿದ್ದವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದರು. ಇದರಿಂದ ಮಿರಾಶಿಯವರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿತ್ತು. ಆದರೆ ಈ ಆರೋಪ ಸುಳ್ಳು ಎಂದು ಮಿರಾಶಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಘಟನೆಯ ದಿನ ಮಿರಾಶಿಯವರು ಯಲ್ಲಾಪುರದ ಮನೆಯಲ್ಲೇ ಇದ್ದರು. ಆದರೆ, ಉದ್ದೇಶಪೂರ್ವಕವಾಗಿ ಅವರ ಹೆಸರು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂದು ಬೆಂಬಲಿಗರಿಂದ ಆರೋಪ ವ್ಯಕ್ತವಾಗಿದೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.