ಕೊರೊನಾ ಸೋಂಕಿತ ಮೃತನ ತಲೆ ಒಡೆದ ವಿಡಿಯೋ ವೈರಲ್: ಶಿರಸಿ ಸರ್ಕಾರಿ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಅನುಮಾನ! - ಶಿರಸಿ ಕೊರೊನಾ ಸುದ್ದಿ
ರೋಗಿ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಮೃತ ದೇಹದ ತಲೆಭಾಗದಲ್ಲಿ ತೀವ್ರ ರಕ್ತಸ್ರಾವ ಆಗುತ್ತಿರುವ ವಿಡಿಯೋ ಜನರ ಆತಂಕಕ್ಕೆ ಕಾರಣವಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಶಿರಸಿ (ಉತ್ತರ ಕನ್ನಡ): ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಮಂಗಳವಾರ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಮೃತನ ತಲೆಯಿಂದ ತೀವ್ರ ರಕ್ತಸ್ರಾವ ಆಗುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಜನರನ್ನು ಭಯ ಭೀತರನ್ನಾಗಿ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸಿದೆ.
ಶಿರಸಿ ತಾಲೂಕಿನ ಬೆಳೆನಳ್ಳಿಯ 70 ವರ್ಷದ ನಿವಾಸಿ ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರೋಗಿ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಮೃತ ದೇಹದ ತಲೆಭಾಗದಲ್ಲಿ ತೀವ್ರ ರಕ್ತಸ್ರಾವ ಆಗುತ್ತಿವ ವಿಡಿಯೋ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಪ್ರಕ್ರಣದ ಬಗ್ಗೆ ಹಲವು ಅನುಮಾನಗಳಿಗೂ ಕಾರಣವಾಗಿದೆ.
ಸೊಂಕಿತ ವ್ಯಕ್ತಿ ಪುತ್ರನ ಜೊತೆಯಲ್ಲಿ ಆಸ್ಪತ್ರೆಗೆ ಆಗಮಿಸಿ, ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೊರೊನಾದಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡು ಮೃತಪಟ್ಟಿದ್ದರು. ಇದಾಗ ಬಳಿಕ ಆಸ್ಪತ್ರೆಯ ವೈದ್ಯರು ಕೊರೊನಾದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದು, ನಂತರ ಪಿಪಿಇ ಕಿಟ್ ಹಾಕಿ ಅಂತ್ಯಸಂಸ್ಕಾರಕ್ಕೆ ಕಳಿಸಿದ್ದರು. ಆದರೆ, ಅಂತ್ಯ ಸಂಸ್ಕಾರದ ವೇಳೆ ತಲೆಯಲ್ಲಿ ರಕ್ತ ಕಾಣಿಸಿಕೊಂಡಿದ್ದು, ಸಾವಿನಲ್ಲಿ ಅನುಮಾನ ಕಾಡುತ್ತಿದೆ ಎಂದು ಪುತ್ರ ಸುದ್ದಿಗಾರರಿಗೆ ದೂರವಾಣಿಯಲ್ಲಿ ತಿಳಿಸಿದರು.
ಅಲ್ಲದೇ ಬರುವಾಗ ಗಟ್ಟಿಯಿದ್ದ ಅಪ್ಪನನ್ನು ಸಾವಿನಿಂದ ಕರೆದುಕೊಂಡು ಹೋಗುವಂತಾಯಿತು. ಯಾವ ವೈದ್ಯರು ತಲೆಗೆ ಪೆಟ್ಟು ಬಿದ್ದದ್ದನ್ನು ತಿಳಿಸಲಿಲ್ಲ ಎಂದು ಪುತ್ರ ಕಣ್ಣೀರಿಟ್ಟರು. ಇದರಿಂದ ಈ ಪ್ರಕರಣದ ಬಳಿಕ ಈ ಸಾವು ವೈದ್ಯರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಸೋಂಕಿತರ ಸಾವು ಭೀಕರವಾಗಿರುತ್ತದೆ ಎನ್ನುವ ಆತಂಕದ ಸುದ್ದಿ ಹರಿದಾಡುತ್ತಿದೆ.
ಕೋವಿಡ್ ಎರಡನೇ ಅಲೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆ ಈಗಾಗಲೇ 20ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಈ ಸಂದರ್ಭದಲ್ಲಿ ಶಿರಸಿ ಆಸ್ಪತ್ರೆಯಲ್ಲಿ ನಡೆದ ಘಟನೆ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅನುಮಾನಾಸ್ಪದ ಸಾವಿನ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಸೂಕ್ತ ಸ್ಪಷ್ಟನೆ ನೀಡಿ, ಜನರ ಆತಂಕ ದೂರ ಮಾಡಬೇಕಿದೆ. ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ ಅವರನ್ನು ಸಂಪರ್ಕಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.