ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಡಲತೀರಗಳು ರಾಜ್ಯ, ಹೊರ ರಾಜ್ಯ ಸೇರಿದಂತೆ ದೇಶ-ವಿದೇಶಗಳ ಪ್ರವಾಸಿಗರನ್ನೂ ಕೈಬೀಸಿ ಕರೆಯುತ್ತವೆ. ಅದರಲ್ಲೂ ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ವಿವಿಧೆಡೆಗಳಿಂದ ಬರುವ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿನ ಬೀಚ್‌ಗಳಿಗೆ ಭೇಟಿ ನೀಡುತ್ತಿದ್ದರು.
ಆದ್ರೀಗ ಕೋವಿಡ್ ತಡೆಗೆ ಇದ್ದ ವಾರಾಂತ್ಯದ ಕರ್ಫ್ಯೂ ತೆರವುಗೊಂಡರೂ ಕೂಡ ಇಲ್ಲಿ ಪ್ರವಾಸಿಗರ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ವೀಕೆಂಡ್‌ನಲ್ಲಿ ಪ್ರವಾಸಿಗರಿಂದ ತುಂಬಿರಬೇಕಿದ್ದ ಕಡಲತೀರಗಳು ಇದೀಗ ಖಾಲಿ ಖಾಲಿ ಎನ್ನುವಂತಿವೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಪ್ರವಾಸಿಗರಿಲ್ಲದೇ ಬಿಕೋ ಎನ್ನುವಂತಿದೆ. ಕಡಲತೀರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದಾಗಿನಿಂದ ಕಡಲ ತೀರಕ್ಕೆ ಆಗಮಿಸುವವರ ಸಂಖ್ಯೆ ಇಳಿಮುಖವಾಗಿದೆ. ಇದೀಗ ವೀಕೆಂಡ್ ಕರ್ಫ್ಯೂ ತೆರವಾಗಿದ್ರೂ ಸಹ ಪ್ರವಾಸಿಗರ ಸುಳಿವೇ ಇಲ್ಲದಂತಾಗಿದೆ.
ಸಂಕಷ್ಟದಲ್ಲಿ ಪ್ರವಾಸೋದ್ಯಮ : ನೆರೆಯ ಗೋವಾ ಇಲ್ಲವೇ ದಕ್ಷಿಣ ಕನ್ನಡದತ್ತ ತೆರಳುವ ಪ್ರವಾಸಿಗರು ಹೆದ್ದಾರಿಯಲ್ಲೇ ಸಿಗುವ ಕಾರವಾರದ ಟ್ಯಾಗೋರ್ ಬೀಚ್‌ಗೆ ಭೇಟಿ ನೀಡಿ ಎಂಜಾಯ್ ಮಾಡಿಕೊಂಡು ತೆರಳುತ್ತಿದ್ದರು. ಆದ್ರೆ, ಕೊರೊನಾ ಮೂರನೇ ಅಲೆಯ ಅಬ್ಬರದಿಂದಾಗಿ ಸರ್ಕಾರ ವೀಕೆಂಡ್‌ನಲ್ಲಿ ಕರ್ಫ್ಯೂ ವಿಧಿಸಿದ್ದು, ಪ್ರವಾಸಿ ತಾಣಕ್ಕೆ ಆಗಮಿಸುವವರ ಸಂಖ್ಯೆ ತೀರಾ ಇಳಿಮುಖವಾಗಿತ್ತು.
ಇದೀಗ ಎರಡು ವಾರಗಳ ಬಳಿಕ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಿದ್ದಾರಾದರೂ ಕಡಲತೀರಗಳಿಗೆ ಆಗಮಿಸಲು ಪ್ರವಾಸಿಗರು ಮಾತ್ರ ಮನಸು ಮಾಡಿದಂತೆ ಕಾಣುತ್ತಿಲ್ಲ. ಪರಿಣಾಮ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಹೋಟೆಲ್, ವಾಟರ್ ಸ್ಪೋರ್ಟ್ಸ್ ಉದ್ಯಮಗಳು ಸಂಕಷ್ಟ ಎದುರಿಸುವಂತಾಗಿದೆ.
ಪ್ರವಾಸಿಗರ ಸಂತಸ : ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಗೋಕರ್ಣ, ಮುರುಡೇಶ್ವರ ಹಾಗೂ ಹೊನ್ನಾವರ ಸೇರಿದಂತೆ ಬಹುತೇಕ ಎಲ್ಲ ಕಡಲತೀರಗಳಲ್ಲೂ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕೋವಿಡ್ ಭೀತಿಯೂ ಇದಕ್ಕೆ ಕಾರಣ ಇರಬಹುದು. ಮುಂದಿನ ದಿನಗಳಲ್ಲಿ ಮೊದಲಿನಂತೆ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.
ಇನ್ನು ಪ್ರತಿನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುವವರು ವಾರಾಂತ್ಯದ ವೇಳೆಗೆ ಕುಟುಂಬಸ್ಥರು, ಸ್ನೇಹಿತರೊಂದಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ. ಹಾಗಾಗಿ, ಇದೀಗ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿದ್ದಕ್ಕೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಂಗೇ ಇವರು.. 85ರ ಅಜ್ಜ Weds 65ರ ಅಜ್ಜಿ.. ಮೈಸೂರಿನಲ್ಲೊಂದು ಅಪರೂಪದ ಭಲೇ ಜೋಡಿ..
ವೀಕೆಂಡ್ ಕರ್ಫ್ಯೂನಿಂದ ರಾಜ್ಯಕ್ಕೆ ಮುಕ್ತಿ ನೀಡಿದೆಯಾದ್ರೂ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಆಗಮಿಸಲು ಇನ್ನಷ್ಟು ಸಮಯ ತೆಗೆದುಕೊಳ್ಳುವುದಂತೂ ಸತ್ಯ. ಕರ್ಫ್ಯೂ ಹೇರಿಕೆಯಿಂದ ಸಂಕಷ್ಟದಲ್ಲಿದ್ದ ಪ್ರವಾಸೋದ್ಯಮ ಇನ್ನಾದ್ರೂ ಚೇತರಿಸಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ