ಕಾರವಾರ : ವಿವಿಧ ಇಲಾಖೆಗಳಲ್ಲಿ ಕೆಲ ಸರ್ಕಾರಿ ನೌಕರರು ಕೆಲಸಕ್ಕಿಂತ ಇತರೆ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ನಿರ್ಲಕ್ಷ ತೋರುವ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಉತ್ತರಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ಈ ಬಗ್ಗೆ ಎಲ್ಲಾ ಇಲಾಖೆಗಳಿಗೆ ಜಿಲ್ಲಾಧಿಕಾರಿ ಡಾ. ಕೆ ಹರೀಶ್‌ಕುಮಾರ್ ಅಧಿಕೃತ ಆದೇಶ ಹೊರಿಡಿಸಿದ್ದಾರೆ. ವಿವಿಧ ಇಲಾಖೆ ಕಚೇರಿ ಹಾಗೂ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಮಯ ಪಾಲನೆಯ ಅರಿವು ಮೂಡಿಸಲು, ಚಲನವಲನವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದ್ದಾರೆ.
ತಮ್ಮ ಕೆಲಸ ಕಾರ್ಯಗಳಿಗೆಂದು ಸಾರ್ವಜನಿಕರು ವಿವಿಧ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿದ ವೇಳೆ ನಿಗದಿಪಡಿಸಿದ ಸಮಯದಲ್ಲಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಕಚೇರಿಯಲ್ಲಿ ಕರ್ತವ್ಯಕ್ಕೆ ಲಭ್ಯವಿರುವುದಿಲ್ಲ. ಒಂದು ವೇಳೆ ಕಚೇರಿಗೆ ಅವರು ಬಂದರೂ ಸಹ ಹರಟೆ ಹೊಡೆಯುತ್ತಾ ಕಾಲಹರಣ ಮಾಡುತ್ತಿರುತ್ತಾರೆ. ಊಟದ ಸಮಯ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಕ್ಯಾಂಟೀನ್‌ನಲ್ಲಿ ಸಮಯ ವ್ಯರ್ಥ ಮಾಡುತ್ತಿರುತ್ತಾರೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿರುವುದರಿಂದ ಎಲ್ಲಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕೆಂದು ಡಿಸಿ ತಮ್ಮ ಆದೇಶದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಚೇರಿಯ ಮುಖ್ಯಸ್ಥರ ಪರವಾನಿಗೆ ಇಲ್ಲದೇ ಅಧೀನ ಸಿಬ್ಬಂದಿ ಮೇಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ರೀತಿಯ ವರ್ತನೆ ನೌಕರರಿಗೆ ಹಾಗೂ ಕಚೇರಿಗೆ ಶೋಭೆ ತರುವಂತದ್ದಲ್ಲ. ಕರ್ತವ್ಯದ ವೇಳೆ ಸಮಯ ವ್ಯರ್ಥ ಮಾಡುವುದು ಮತ್ತು ಪರವಾನಿಗೆ ಪತ್ರವಿಲ್ಲದೇ ಅಧೀನ ಕಚೇರಿ ಸಿಬ್ಬಂದಿ ಮೇಲಾಧಿಕಾರಿ ಕಚೇರಿಗೆ ಭೇಟಿ ನೀಡಿದಲ್ಲಿ, ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು.
ಜೊತೆಗೆ ಅಧೀನ ಕಚೇರಿಯ ಸಿಬ್ಬಂದಿ ಪದೇಪದೆ ಜಿಲ್ಲಾಧಿಕಾರಿ ಕಚೇರಿಗೆ ಬಂದಲ್ಲಿ ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ನಿಗದಿಪಡಿಸಿದ ಸಮಯ ಪಾಲನೆಯ ಜೊತೆಗೆ ಕರ್ತವ್ಯಕ್ಕೆ ಹಾಜರಾಗಿ ಕಚೇರಿ ಕೆಲಸ ನಿರ್ವಹಿಸುವಂತೆ ಆಯಾ ಇಲಾಖೆ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವ ಸಿಬ್ಬಂದಿಗೆ ತಿಳಿಸಬೇಕು. ಕಚೇರಿಯಲ್ಲಿ ಬಯೋಮೇಟ್ರಿಕ್ ಕಡ್ಡಾಯಗೊಳಿಸಬೇಕು. ಅಲ್ಲದೇ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ದಿನದ 24 ಗಂಟೆ ಕೇಂದ್ರ ಸ್ಥಾನದಲ್ಲಿ ಲಭ್ಯವಿರಬೇಕು ಎಂದು ಅವರು ಸೂಚಿಸಿದ್ದಾರೆ.