ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ನಾಳೆ ಮತ್ತು ಮೇ 22 ರಿಂದ ಮೇ 24 ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಎಲ್ಲರೂ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಮುಖವಾಗಿ ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡು ಪಟ್ಟಣಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದು, ಇಲ್ಲಿ ನಾಳೆಯಿಂದಲೇ ಸಂಪೂರ್ಣ ಲಾಕ್ಡೌನ್ ಇರಲಿದೆ. ಉಳಿದ ತಾಲೂಕುಗಳಲ್ಲಿ ಮೇ 22ರ ಬೆಳಗ್ಗೆ 6ಗಂಟೆಯಿಂದ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು. ಸಾರ್ವಜನಿಕರು ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ
ಉತ್ತರಕನ್ನಡ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಹೇರಲಾಗಿದೆ. ಈ ವೇಳೆ ಎಲ್ಲಾ ಖಾಸಗಿ ವಾಹನಗಳ ಸಂಚಾರವನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವೈದ್ಯಕೀಯ, ತುರ್ತು ಸೇವೆ ಹಾಗೂ ಸರಕಾರಿ ನೌಕರರು (ಗುರುತಿನ ಚೀಟಿ ಇದ್ದಲ್ಲಿ ಮಾತ್ರ) ಸಂಚರಿಸಬಹುದಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ.
ಇದಲ್ಲದೆ ಶಿರಸಿ, ಸಿದ್ಯಾಪುರ, ಯಲ್ಲಾಪುರ, ಮುಂಡಗೋಡ ಪಟ್ಟಣ ವ್ಯಾಪ್ತಿಯನ್ನು ವಿಶೇಷ ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಈ ಮೇಲಿನ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ವಿಭಾಗ 51 ರಿಂದ 60 ರನ್ವಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.