ಕಾರವಾರ: ರಾಜ್ಯದಲ್ಲಿ ಹೆಚ್ಚು ಪಾಟಿಸಿವಿಟಿ ದರ ಹೊಂದಿದ್ದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಮೇ ಮೂರನೇ ವಾರದಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದೆ. ಇದು ಉತ್ತರ ಕನ್ನಡಿಗರ ಆತಂಕವನ್ನು ಕೊಂಚ ಕಡಿಮೆಯಾಗುವಂತೆ ಮಾಡಿದೆ.
ಮೇ. 19ರಿಂದ 25ರವರೆಗಿನ ಮಾಹಿತಿಯಂತೆ 16 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ ಎಂದಿರುವ ರಾಜ್ಯ ಕೊರೊನಾ ವಾರ್ ರೂಮ್, ಪಾಸಿಟಿವಿಟಿ ರೇಟ್ ಹೆಚ್ಚಿರುವ ಟಾಪ್ 5 ಜಿಲ್ಲೆಗಳ ಹೆಸರನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಮೈಸೂರಿನಲ್ಲಿ ಶೇ. 41.32, ಉತ್ತರ ಕನ್ನಡ- 32.98, ಹಾಸನ- 29.93, ತುಮಕೂರು- 29.33 ಮತ್ತು ಕೊಪ್ಪಳದಲ್ಲಿ ಶೇ. 29.21ರಷ್ಟು ಪಾಸಿಟಿವಿಟಿ ರೇಟ್ ಇದೆ ಎಂದು ಹೇಳಿದೆ.
ಬೆಂಗಳೂರು ನಗರದಲ್ಲಿ ಕಳೆದೊಂದು ವಾರದಿಂದ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಕಳೆದೊಂದು ವಾರದಲ್ಲಿ ಶೇ. 13.58ರಷ್ಟಿದೆ. ಹಾವೇರಿ- 13.48, ಬಾಗಲಕೋಟೆ- 11.67, ಕಲಬುರಗಿ- 10.20 ಮತ್ತು ಬೀದರ್‌ನಲ್ಲಿ ಶೇ. 2.58ರಷ್ಟಿದೆ. ಶಿವಮೊಗ್ಗ ಮತ್ತು ವಿಜಯಪುರದಲ್ಲಿ ರಾಜ್ಯ ಸರಾಸರಿಯಷ್ಟೇ ಪಾಸಿಟಿವಿಟಿ ದರವಿದೆ. ರಾಜ್ಯ ಸರಾಸರಿಗಿಂತ 12 ಜಿಲ್ಲೆಗಳಲ್ಲಿ ಮಾತ್ರ ಪಾಸಿಟಿವಿಟಿ ದರ ಕಡಿಮೆಯಿದ್ದು, ಉತ್ತರ ಕನ್ನಡ ಸೇರಿ ಉಳಿದೆಲ್ಲ ಜಿಲ್ಲೆಗಳಲ್ಲೂ ಹೆಚ್ಚಿದೆ ಎಂದು ವಾರ್ ರೂಮ್ ಹೇಳಿದೆ.
ಇದನ್ನೂ ಓದಿ: ಪಾಸಿಟಿವಿಟಿ ರೇಟ್ನಲ್ಲಿ ಉತ್ತರ ಕನ್ನಡವೇ ಫಸ್ಟ್: ಸೋಂಕು ತಡೆಯುವಲ್ಲಿ ವಿಫಲವಾಯ್ತಾ ಜಿಲ್ಲಾಡಳಿತ?
ಈ ಹಿಂದೆ ಮೇ 5ರಿಂದ 11ರವರೆಗಿನ ಪಾಸಿಟಿವಿಟಿ ದರಗಳ ಪಟ್ಟಿಯಲ್ಲಿ ರಾಜ್ಯದಲ್ಲಿ ಉತ್ತರ ಕನ್ನಡ ಮೊದಲ ಸ್ಥಾನದಲ್ಲಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ. 46.6ರಷ್ಟು ಪಾಸಿಟಿವಿಟಿ ದರವಿತ್ತು.
ಪಾಸಿಟಿವಿಟಿ ರೇಟ್ ಎಂದರೇನು?
ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವವರಲ್ಲಿ ಸೋಂಕು ದೃಢಪಡುವ ದರವನ್ನು ಪಾಸಿಟಿವಿಟಿ ರೇಟ್ ಎನ್ನಲಾಗುತ್ತದೆ. ಅಂದರೆ, 100 ಮಂದಿ ತಪಾಸಣೆ ಮಾಡಿಸಿಕೊಂಡರೆ ಅದರಲ್ಲಿ 50 ಜನರಿಗೆ ಕೋವಿಡ್ ಪಾಸಿಟಿವ್ ಬಂದರೆ ಆಗ ಪಾಸಿಟಿವಿ ದರ ಶೇ. 50 ಇರಲಿದೆ. ಪಾಸಿಟಿವಿ ದರ ಹೆಚ್ಚಿದೆ ಎಂದರೆ ಸೋಂಕು ಹೆಚ್ಚಾಗಿ ಹರಡಿದೆ ಎಂದರ್ಥ ಎಂದು ಹೇಳುತ್ತದೆ ಆರೋಗ್ಯ ಸಚಿವಾಲಯ.
ಜಿಲ್ಲಾಧಿಕಾರಿ ಏನಂತಾರೆ?
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದೆ ಎಂದು ಭಯ ಪಡುವುದು ಬೇಡ. ಮನೆ ಮನೆಯ ಸಮೀಕ್ಷೆ ನಡೆಸಿ, ಸೋಂಕಿನ ಲಕ್ಷಣ ಇದ್ದವರನ್ನು ಶೀಘ್ರ ಗುರುತಿಸುವಲ್ಲಿ ಸಫಲರಾಗಿದ್ದೇವೆ. ಹೀಗಾಗಿ ಪಾಸಿಟಿವಿಟಿ ದರ ಹೆಚ್ಚಾಗಿದೆ. ದರ ಹೆಚ್ಚಿದೆ ಎಂದರೆ ಜಾಸ್ತಿ ಜನರಿಗಿದೆ ಎಂದರ್ಥವಲ್ಲ. ನಾವು ಪರೀಕ್ಷೆ ನಡೆಸಿದವರಲ್ಲಿ ಮಾತ್ರ ಕೋವಿಡ್ ದೃಢಪಟ್ಟಿದೆ ಎಂದರ್ಥ. ಜನರು ಅನವಶ್ಯಕವಾಗಿ ಗೊಂದಲಕ್ಕೊಳಗಾಗದೆ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತರಾಗಿರುವಂತೆ ಮನವಿ ಮಾಡಿದ್ದಾರೆ.