ಕಾರವಾರ (ಉತ್ತರ ಕನ್ನಡ): ತಮಿಳುನಾಡಿನಲ್ಲಿ ನಡೆದ ನ್ಯಾಷನಲ್ ಅಥ್ಲೆಟಿಕ್ಸ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ದನಗರ ಗೌಳಿ ಜನಾಂಗದ ಯುವತಿಯೋರ್ವಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಸಾಧಿಸುವ ಹಟ ಇದ್ದರೆ ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಪ್ರಶ್ನೆ ಅಲ್ಲ ಎಂದು ಸಾಬೀತು ಮಾಡಿದ್ದಾಳೆ.
ತಾಲೂಕಿನ ಚಳಗೇರಿಯ ಗ್ರಾಮದ ನಯನಾ ಕೊಕರೆ ತಮಿಳುನಾಡಿನಲ್ಲಿ ನಡೆದ 20 ವರ್ಷದೊಳಗಿನ ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಜೂನ್ 4 ರಂದು ಕೋರಿಯಾದಲ್ಲಿ ನಡೆಯುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಗೆ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದುಕೊಂಡಿದ್ದಾಳೆ.
ನಯನಾ ಕಾಡಿನಲ್ಲಿ ವಾಸಿಸುವ ದನಗರ ಗೌಳಿ ಜನಾಂಗದ ಗಂಗಾರಾಮ ಕೊಕರೆ ಮತ್ತು ಗಂಗುಬಾಯಿ ದಂಪತಿ ಪುತ್ರಿಯಾಗಿದ್ದಾಳೆ. ಸ್ವಂತ ಊರು ಚಳಗೇರಿಯಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದ ಈಕೆ ಬಳಿಕ ಕಾತೂರಿನ ಪ್ರೌಢಶಾಲೆಯಲ್ಲಿ 8 ಮತ್ತು 9ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಳು. ನಂತರ ಲೊಯೋಲ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ದಾಳೆ.
7ನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 100ಮೀ., 200ಮೀ., ಮತ್ತು 400ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಳು. 10ನೇ ತರಗತಿಯಲ್ಲಿ ಓದುತ್ತಿರುವಾಗ ರಾಜ್ಯ ಮಟ್ಟದ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದಿದ್ದಳು. ಬಾಲ್ಯದಿಂದಲೂ ಅಥ್ಲೆಟಿಕ್ಸ್ನಲ್ಲಿ ತುಂಬಾ ಆಸಕ್ತಿ ಹೊಂದಿದ ನಯನಾ ಪ್ರತಿಭಗೆ ಕಷ್ಟದಲ್ಲಿರುವ ತಂದೆ - ತಾಯಿ ಕೂಡ ಬೆನ್ನೆಲುಬಾಗಿ ನಿಂತಿದ್ದು ಇಂದು ಈ ಸಾಧನೆಗೆ ಸಹಕಾರಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಸಿಎಸ್ಕೆ ಐಪಿಎಲ್ ರನ್ನರ್ ಅಪ್': ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ 'ಆ ಚಿತ್ರ'
ಸದ್ಯ ನಯನಾ ಇಲ್ಲಿನ ಬ್ರಿಜಸ್ ಆಫ್ ಸ್ಟೊರ್ಟ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಉತೀರ್ಣವಾಗಿದ್ದಾಳೆ. ಈ ಹಿಂದೆ 2022 ನವೆಂಬರ್ 15ರಲ್ಲಿ ಅಸ್ಸೋಂನಲ್ಲಿ ನಡೆದ 37ನೇ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಕ್ರೀಡಾಕೂಟದಲ್ಲಿ 49.23 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ಹಾಗೂ 400 X 100 ಮೀಟರ್ ರಿಲೇಯಲ್ಲಿ ತೃತೀಯ ಸ್ಥಾನ ಪಡೆದಿದ್ದಳು.
2022 ಆಂಧ್ರ ಪ್ರದೇಶದ ಗುಂಟೂರ್ ಜಿಲ್ಲೆಯಲ್ಲಿ ನಡೆದ ನ್ಯಾಷನಲ್ ಅಥ್ಲೆಟಿಕ್ಸ್ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 200 ಮೀಟರ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಳು. 2022ರ ಅಕ್ಟೋಬರ್ 12ರಂದು ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 3ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 400ಮೀಟರ್ ಓಟದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಳು.
ಇದನ್ನೂ ಓದಿ: IPLನಲ್ಲಿ ಈ ರೋಚಕ ಕ್ಷಣಗಳನ್ನು ಮಿಸ್ ಮಾಡಿದ್ದೀರಾ? ಹಾಗಿದ್ರೆ, ಫೋಟೋ ಸಮೇತ ನೋಡಿ!