ಕಾರವಾರ: ಬಹುಭಾಗ ಅರಣ್ಯ ಪ್ರದೇಶದಿಂದಲೇ ಕೂಡಿರುವ ಉತ್ತರಕನ್ನಡ ಜಿಲ್ಲೆಯಲ್ಲಿನ ಬಹುತೇಕ ಹಳ್ಳಿಗಳಿರುವುದು ಗುಡ್ಡಗಾಡು ಪ್ರದೇಶಗಳಲ್ಲಿ. ಇಂತಹ ಕೆಲ ಹಳ್ಳಿಗಳಿಗೆ ಅಡ್ಡಲಾಗಿರುವ ನದಿಗಳಿಗೆ ದಶಕಗಳ ಹಿಂದೆ ತೂಗು ಸೇತುವೆ ನಿರ್ಮಿಸಲಾಗಿತ್ತು. ಆದರೆ, ಈ ತೂಗು ಸೇತುವೆಗಳು ಸೂಕ್ತ ನಿರ್ವಹಣೆ ಇಲ್ಲದೇ ದುರಸ್ತಿಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದು, ಇದೀಗ ಗುಜರಾತ್ನ ಮೊರ್ಬಿ ಸೇತುವೆ ದುರಂತದ ಬೆನ್ನಲ್ಲೇ ಜಿಲ್ಲೆಯಲ್ಲಿ ಆತಂಕ ನಿರ್ಮಾಣವಾಗಿದೆ.
ಗುಜರಾತ್ನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತಕ್ಕೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶತಮಾನಗಳ ಹಿಂದೆ ನಿರ್ಮಾಣಗೊಂಡು ಇತ್ತೀಚೆಗಷ್ಟೇ ಜೀರ್ಣೋದ್ಧಾರ ನಡೆಸಿದ್ದರೂ ಸೇತುವೆ ಮೇಲೆ ಒಮ್ಮೆಲೇ ಜನಸಂದಣಿ ಉಂಟಾಗಿ ಕೆಲ ಕಿಡಿಗೇಡಿಗಳು ನಡೆಸಿದ ದುಸ್ಸಾಹಸಕ್ಕೆ ದೊಡ್ಡ ದುರಂತ ಸಂಭವಿಸಿದೆ. ಇದೀಗ ಉತ್ತರಕನ್ನಡ ಜಿಲ್ಲೆಯಲ್ಲೂ ಇಂತಹದ್ದೇ ಆತಂಕ ಶುರುವಾಗಿದೆ.
ಶೇ 75 ಅರಣ್ಯ ಪ್ರದೇಶದಿಂದಲೇ ಕೂಡಿರುವ ಜಿಲ್ಲೆಯಲ್ಲಿನ ಜನವಸತಿ ಪ್ರದೇಶಗಳ ಸಂಪರ್ಕಕ್ಕೆ 6 ತೂಗು ಸೇತುವೆಗಳನ್ನು ನಿರ್ಮಾಣ ಮಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಇದರಿಂದ ದೋಣಿ, ತೆಪ್ಪಗಳ ಮೂಲಕ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದವರಿಗೆ ಈ ಸಂಪರ್ಕ ವ್ಯವಸ್ಥೆ ಮುಖ್ಯವಾಹಿನಿಯೊಂದಿಗೆ ಬೆರೆಯುವುದಕ್ಕೆ ಅನುಕೂಲವಾಗಿತ್ತು. ಆದರೆ, 2019 ರಿಂದ ಸತತವಾಗಿ 3 ವರ್ಷ ಎದುರಾದ ಪ್ರವಾಹಕ್ಕೆ ಗಂಗಾವಳಿ ನದಿಗೆ ಅಡ್ಡಲಾಗಿದ್ದ ಎರಡು ಹಾಗೂ ಅಘನಾಶಿನಿ ನದಿಗೆ ಬಡಾಳ ಬಳಿ ನಿರ್ಮಿಸಿದ್ದ ಒಂದು ಸೇತುವೆ ಕೊಚ್ಚಿ ಹೋಗಿದೆ. ಇದೀಗ ಇದ್ದ ಮೂರು ಸೇತುವೆಗಳು ತುಕ್ಕು ಹಿಡಿದು ಜೀರ್ಣಾವಸ್ಥೆಗೆ ತಲುಪಿದೆ.
ಇದನ್ನೂ ಓದಿ: ಗುಜರಾತ್ ದುರ್ಘಟನೆ ಆದ್ರೂ ಬುದ್ಧಿ ಕಲಿಯದ ಜನ.. ಯಲ್ಲಾಪುರದಲ್ಲಿ ತೂಗು ಸೇತುವೆ ಮೇಲೆ ಕಾರು ಓಡಿಸಿ ಉದ್ಧಟತನ
ತೂಗು ಸೇತುವೆ ನಿರ್ಮಾಣದ ಬಳಿಕ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕಬ್ಬಿಣದ ಪಟ್ಟಿಗಳು ತುಂಡಾಗಿವೆ. ಅದರಲ್ಲಿಯೂ ಜೊಯಿಡಾದ ಶಿವಪುರ ಸಂಪರ್ಕಕ್ಕೆ ಕಾಳಿ ನದಿಗೆ ನಿರ್ಮಿಸಿದ ಸೇತುವೆ ಹಾಗೂ ಹೊನ್ನಾವರದ ಬಡಗಣಿ ಬಳಿ ನಿರ್ಮಿಸಿದ ಸೇತುವೆಗಳು ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿವೆ. ಅಲ್ಲದೇ, ಈ ಸೇತುವೆಗಳ ಮೇಲೆ ಬಂದಂತಹ ಪ್ರವಾಸಿಗರು ಕಾರು ಬೈಕ್ಗಳ ಮೂಲಕ ಹುಚ್ಚು ಸಾಹಸ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಆತಂಕ ಹೆಚ್ಚಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ತೂಗು ಸೇತುವೆಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಉಡುಪಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ನಿರ್ಮಿಸಿದ್ದರು. ಆದರೆ, ನಿರ್ವಹಣೆ ಸರ್ಕಾರವೇ ಮಾಡಬೇಕು ಎಂದು ಆಯಾ ಗ್ರಾ.ಪಂ ಗಳಿಗೆ ಸೇತುವೆ ಜವಾಬ್ದಾರಿ ಹಸ್ತಾಂತರಿಸಲಾಗಿತ್ತು. ಇದುವರೆಗೂ ಸೇತುವೆ ನಿರ್ವಹಣೆ ಮಾಡದ ಕಾರಣ ಸದ್ಯ ಇರುವ ಮೂರು ಸೇತುವೆಗಳು ದುರಸ್ತಿಗೆ ತಲುಪಿವೆ. ತೂಗು ಸೇತುವೆಯ ರೋಪ್ಗಳು ತುಕ್ಕು ಹಿಡಿದಿದ್ದು, ಸೇತುವೆಯ ಲಿಂಕ್ಗಳು ಅಲ್ಲಲ್ಲಿ ಮುರಿದು ಹೋಗಿವೆ. ಇದರಿಂದ ಪ್ರತಿ ದಿನ ಸೇತುವೆ ಮೇಲೆ ಓಡಾಡುವ ಜನ ಆತಂಕಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಗುಜರಾತ್ ತೂಗು ಸೇತುವೆ ದುರಂತ: ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ್ರೆ, ಅಧಿಕಾರಿಗಳು ಅಧ್ಯಯನ ನಡೆಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.