ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ. ಜನ ಈಗಾದರೂ ಎಚ್ಚೆತ್ತು ಕೋವಿಡ್ ಚೈನ್ ಬ್ರೇಕ್ ಮಾಡದೇ ಇದ್ದಲ್ಲಿ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾದ ಸ್ಥಿತಿ ಬರಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಚ್ಚರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 1277 ಸೋಂಕಿತ ಪ್ರಕರಣ ಪತ್ತೆಯಾಗಿವೆ. ಹೀಗಾಗಿ, ಜನ ಎಚ್ಚೆತ್ತುಕೊಳ್ಳಬೇಕಿದೆ.
ಸದ್ಯ 502 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 297 ಮಂದಿ ಆಕ್ಸಿಜನ್‌ನಲ್ಲಿ 188 ಮಂದಿ ಸಾಮಾನ್ಯ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 298 ಆಕ್ಸಿಜನ್ ಬೆಡ್, 218 ಸಾಮಾನ್ಯ ಬೆಡ್ ಜೊತೆಗೆ 1200 ಆಕ್ಸಿಜನ್ ಸಿಲಿಂಡರ್ ಲಭ್ಯ ಇರುವುದಾಗಿ ತಿಳಿಸಿದರು.
ಪ್ರತಿದಿನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಬೇರೆ ಜಿಲ್ಲೆಗಳ ಬೆಡ್ ಭರ್ತಿಯಾಗಿರುವುದರಿಂದ ನಮ್ಮಜಿಲ್ಲೆಯ ಬೆಡ್ಗಳಿಗೆ ಬೇಡಿಕೆ ಬರುವ ಸಾಧ್ಯತೆ ಇರುವುದರಿಂದ ಈಗಾಗಲೇ ಹೆಚ್ಚಿನ ವ್ಯವಸ್ಥೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಸರ್ಕಾರ ಈಗಾಗಲೇ ಆದೇಶಿಸಿದಂತೆ ನಾಳೆಯಿಂದ ಕಟ್ಟುನಿಟ್ಟಾದ ಲಾಕ್ಡೌನ್ ಜಾರಿ ಮಾಡಲಾಗುತ್ತಿದೆ. ಜನ ಅನಗತ್ಯವಾಗಿ ಓಡಾಡಬಾರದು, ತುರ್ತು ಅಗತ್ಯತೆ ಹಾಗೂ ಸರ್ಕಾರಿ ಮತ್ತು ಕೆಲ ಖಾಸಗಿ ಅಗತ್ಯತೆ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆಗೆ 40 ಮಂದಿ ಮಾತ್ರ ಸೇರಲು ಅವಕಾಶ ಇದ್ದು, ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೆ ಗ್ರಾಮೀಣ ಭಾಗಗಳಿಗೂ ತರಕಾರಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಾಹನದ ಮೂಲಕ ಕಳುಹಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.