ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ವಾರಾಂತ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪರಿಣಾಮ, ಕಾರವಾರ ನಗರದಲ್ಲಿ ಜನ ಸಂಚಾರ ಸ್ಥಗಿತಗೊಂಡಿದೆಯಾದರೂ ನೌಕಾನೆಲೆಗೆ ತೆರಳುವ ಸಾವಿರಾರು ಸಿಬ್ಬಂದಿ ಹಾಗೂ ವಾಹನಗಳೇ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿನಿತ್ಯ ಸಾವಿರ ಆಸುಪಾಸು ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆ ಇಂದಿನಿಂದ ಎರಡು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಬೆಳಗ್ಗೆ 6ರಿಂದ 10 ಗಂಟೆವರೆಗೆ ಇದ್ದ ಅವಕಾಶವನ್ನು ನಿಷೇಧಿಸಿದ್ದು, ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಬಿಗಿ ಕ್ರಮ ಜಾರಿಗೊಳಿಸಲಾಗಿದ್ದು, ಪೊಲೀಸರು ಎಲ್ಲೆಡೆ ಚೆಕ್ ಪೋಸ್ಟ್ ಹಾಕಿ ಅನಗತ್ಯ ಓಡಾಡುವವರ ಮೇಲೆ ನಿಗಾ ಇಟ್ಟಿದ್ದಾರೆ.
ಕಾರವಾರದಲ್ಲಿಯೂ ಕೂಡ ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ಕಾರವಾರದ ಅರಗಾದಲ್ಲಿರುವ ಸೀಬರ್ಡ್ ನೌಕಾನೆಲೆಗೆ ನಗರದಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ನೂರಾರು ವಾಹನಗಳ ಮೂಲಕ ಓಡಾಟ ನಡೆಸುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಯಾರನ್ನೇ ಕೇಳಿದ್ರು ಕೂಡ ಸೀಬರ್ಡ್ ನೌಕಾನೆಲೆ ಕೆಲಸಕ್ಕೆಂದು ಹೇಳಿ ತೆರಳುತ್ತಿರುವವರೇ ಹೆಚ್ಚಾಗಿದ್ದಾರೆ.
ಇದನ್ನೂ ಓದಿ: 3ನೇ ದಿನದ ಲಾಕ್ಡೌನ್: ಕಲಬುರಗಿ ಜಿಲ್ಲೆ ಸಂಪೂರ್ಣ ಸ್ತಬ್ಧ
ಅಲ್ಲದೇ ಟೆಂಪೋ, ಜೀಪುಗಳ ಮೂಲಕ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು, ಸಿಬ್ಬಂದಿಯನ್ನು ಕೊಂಡೊಯ್ಯುತ್ತಿದ್ದಾರೆ. ಇಂದು ಲಾಕ್ಡೌನ್ ಬಂದೋಬಸ್ತ್ನಲ್ಲಿದ್ದ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್ಐಗಳಾದ ಸಂತೋಷ್ ಕುಮಾರ್, ರೇವಣ್ಣ ಸಿದ್ದಪ್ಪ, ನಾಗಪ್ಪ ನಗರದ ವಿವಿಧೆಡೆ ತಪಾಸಣೆ ನಡೆಸಿ ಹೆಚ್ಚಿನ ಜನರನ್ನು ತುಂಬಿಕೊಂಡು ತೆರಳುತ್ತಿದ್ದ ಕೆಲ ಟೆಂಪೋಗಳಿಗೆ ದಂಡ ಹಾಕಿ ಇನ್ನು ಕೆಲ ವಾಹನಗಳಿಂದ ಸಿಬ್ಬಂದಿ ಇಳಿಸಿ ನಿಗದಿಪಡಿಸಿದಷ್ಟು ಸಿಬ್ಬಂದಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿ ಬಿಸಿ ಮುಟ್ಟಿಸಿದ್ದಾರೆ.