ಕಾರವಾರ: ಜಿಲ್ಲೆಯ 8 ಕೊರೊನಾ ಸೋಂಕಿತರ ಪೈಕಿ ಇಬ್ಬರು ಗುಣಮುಖರಾಗಿದ್ದು, ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿರುವ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಈಗಾಗಲೇ ಇಬ್ಬರು ಪೂರ್ಣ ಗುಣಮುಖರಾಗಿದ್ದು, ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಆದರೆ ಮುಂಜಾಗ್ರತೆ ದೃಷ್ಟಿಯಿಂದ ಮುಂದಿನ 14 ದಿನಗಳ ಕಾಲ ಜಿಲ್ಲಾಡಳಿತವೇ ಕ್ವಾರಂಟೈನ್ ಮಾಡಲಿದ್ದು, ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗುವುದು ಎಂದರು.
ಅಲ್ಲದೇ ಇನ್ನುಳಿದ ಸೋಂಕಿತರು ಸಹ ಏಪ್ರಿಲ್ 14ರೊಳಗೆ ಸಂಪೂರ್ಣ ಗುಣಮುಖವಾಗುವ ವಿಶ್ವಾಸವಿದೆ. ಜೊತೆಗೆ ಸೋಂಕಿತರ ಸಂಪರ್ಕಕ್ಕೆ ಬಂದವರು ಸಹ 14 ದಿನಗಳನ್ನ ಪೂರೈಸುತ್ತಿದ್ದು, ಅವರ ನಿಗಾ ಅವಧಿ ಸಹ ಮುಕ್ತಾಯಗೊಳ್ಳುತ್ತಿದೆ ಎಂದು ಹೇಳಿದರು.
ಇನ್ನು ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನಮ್ಮ ಜಿಲ್ಲೆಯವರ ಗಂಟಲು ದ್ರವದ ಪರೀಕ್ಷೆಗಳು ಸಹ ನೆಗೆಟಿವ್ ಬಂದಿದ್ದು, ಉಳಿದಂತೆ ಅಂತಹವರ ಸಂಪರ್ಕಕ್ಕೆ ಬಂದವರು ಹಾಗೂ ಸ್ಥಳೀಯರು ಸೇರಿ ಇನ್ನೂ 50 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇರಲಿದೆ ಎನ್ನುವುದು ಮುಂದಿನ ವಾರದೊಳಗೆ ತಿಳಿದು ಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.