ಭಟ್ಕಳ (ಉ.ಕ): ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಮಿನಿ ಕಂಟೇನರ್ ಅನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಶಿರಾಲಿ ಚೆಕ್ ಪೋಸ್ಟ್ನಲ್ಲಿ ತಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಹಳೆ ಹುಬ್ಬಳ್ಳಿಯ ಅಲ್ತಾಫ್ ಫ್ಲಾಟ್ನ ಲಾಸ್ಟ್ ಕ್ರಾಸ್ ನಿವಾಸಿಯಾದ ಉಮರ್ ಫಾರೂಕ್ ಆದಂ ಸಾಬ್ಮುಲ್ಲಾ (34) ಹಾಗೂ ಹಳೆ ಹುಬ್ಬಳ್ಳಿಯ ಅಲ್ತಾಫ್ ನಗರ ನಿವಾಸಿ ಮೈನುದ್ದೀನ್ ಹಜರತ್ ಎಂದು ತಿಳಿದು ಬಂದಿದೆ.
ಅಕ್ರಮವಾಗಿ ದನದ ಮಾಂಸವನ್ನು ಹಳೆ ಹುಬ್ಬಳ್ಳಿಯಿಂದ ಮಂಗಳೂರಿಗೆ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ, ಭಟ್ಕಳ ಉಪ ವಿಭಾಗದ ಎ.ಎಸ್.ಪಿ ನಿಖಿಲ್.ಬಿ ಹಾಗೂ ಸಿ.ಪಿ.ಐ ದಿವಾಕರ ಮಾರ್ಗದರ್ಶನದಲ್ಲಿ ಮಾಹಿತಿ ಪಡೆದ ಗ್ರಾಮೀಣ ಠಾಣೆ ಪಿ.ಎಸ್.ಐ. ಹೆಚ್ ಓಂಕಾರಪ್ಪ ನೇತೃತ್ವದಲ್ಲಿ ಠಾಣಾ ಸಿಬ್ಬಂದಿ ಶಿರಾಲಿ ಚೆಕ್ ಪೋಸ್ಟ್ಗೆ ತೆರಳಿ ಚೆಕ್ ಪೋಸ್ಟ್ ಸಿಬ್ಬಂದಿಯೊಂದಿಗೆ ಲಾರಿ ಅಡ್ಡಗಟ್ಟಿ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಮೀನು ತುಂಬಿದ ಲಾರಿ ಎಂದು ತಿಳಿದು ಬಂದಿದ್ದು, ಮಿನಿ ಕಂಟೇನರ್ ಬಾಗಿಲು ತೆಗೆಸಿ, ಮೀನು ತುಂಬಿದ ಪ್ಲಾಸ್ಟಿಕ್ ಬಾಕ್ಸ್ ತೆಗೆದು ಪರಿಶೀಲಿನೆ ಮುಂದುವರೆಸಿದಾಗ ಒಳಗಡೆ ಸುಮಾರು 500ಕೆಜಿಯಷ್ಟು ಒಂದು ಲಕ್ಷ ರೂ ಮೌಲ್ಯದ ದನದ ಮಾಂಸವನ್ನು ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ದನದ ಮಾಂಸಕ್ಕೆ ಐಸ್ ಹಾಕಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಣೆ ಮಾಡಲು ಪರವಾನಗಿ ಪಡೆಯದೇ ಎಲ್ಲಿಂದಲೋ ಕಳವು ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಣೆ ಮಾಡುತ್ತಿರುವುದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ದನದ ಮಾಂಸ ಸಹಿತ ಮೀನು ತುಂಬುವ 8 ಪ್ಲಾಸ್ಟಿಕ್ ಖಾಲಿ ಬಾಕ್ಸ್, ದನದ ಮಾಂಸ ಸಾಗಣೆ ಮಾಡಲು ಬಳಸಿದ ಮಿನಿ ಕಂಟೇನರ್ ವಶಕ್ಕೆ ಪಡೆಯಲಾಗಿದೆ.