ಕಾರವಾರ: ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದ ವ್ಯಕ್ತಿಗಳಿಗೆ ಗಣರಾಜ್ಯೋತ್ಸವ ಹಿಂದಿನ ದಿನದಂದು ಪ್ರತಿ ವರ್ಷ ಭಾರತ ಸರ್ಕಾರವು ಪದ್ಮ ಶ್ರೀ ಪ್ರಶಸ್ತಿಗಳನ್ನು ಪ್ರಕಟಿಸುತ್ತದೆ. ಈ ಬಾರಿ ಪ್ರಕಟವಾದ ಪಟ್ಟಿಯಲ್ಲಿ ತುಳಸಿ ಗೌಡ ಎಂಬಾ ಕರ್ನಾಟಕದ ವೃಕ್ಷಮಾತೆ ಆಯ್ಕೆಯಾಗಿದ್ದರು. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ವೃಕ್ಷಮಾತೆಯನ್ನೊಮ್ಮೆ ನೆನಪಿಸಿಕೊಳ್ಳೋಣ.
ಗಿಡಗಳನ್ನು ಪೋಷಿಸುತ್ತಿರುವ ಇವರ ಹೆಸರು ತುಳಸಿ ಗೌಡ, ಇವರು ಉತ್ತರ ಕನ್ನಡದ ಅಂಕೋಲಾ ತಾಲೂಕಿನವರು. ಮಹಿಳೆಯಾಗಿ ಇವರು 30 ವರ್ಷಗಳಿಂದ ನಿರಂತರವಾಗಿ ಗಿಡಗಳನ್ನು ಬೆಳೆಸಿ, ಅವುಗಳನ್ನು ಪೋಷಿಸುತ್ತಾ ಬಂದಿದ್ದಾರೆ. ಇವರಿಗೆ ಕಳೆದ ಜನವರಿ 26 ರಂದು ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಈ ಮಹಿಳೆ ಇಡೀ ಸ್ರೀ ಕುಲಕ್ಕೆ ಹೆಮ್ಮೆ ಅಂದ್ರು ತಪ್ಪಾಗಲಾರದು. ಇವರ ಪರಿಸರ ಕಾಳಜಿ ನಿಜಕ್ಕೂ ಹೆಮ್ಮೆ ಪಡುವಂತಹದ್ದು, ಕೂಲಿ ಕೆಲಸದ ಮೂಲಕ ಆರಂಭವಾದ ಇವರ ಪರಿಸರ ಪ್ರೇಮ ಇಂದು ಲಕ್ಷಾಂತರ ಮರಗಳನ್ನು ಬೆಳೆಸುವ ಹಂತಕ್ಕೆ ಬಂದು ತಲುಪಿದೆ.
ಸಾಲುಮರದ ತಿಮ್ಮಕ್ಕನಂತೆ ಚಿಕ್ಕವಯಸ್ಸಿನಿಂದಲೇ ಗಿಡಗಳನ್ನು ಮಕ್ಕಳಂತೆ ಬೆಳಸಿದ ಬಡ ಮಹಿಳೆಗೆ ದೇಶದ ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿ ದೊರೆತಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. 1944ರಲ್ಲಿ ಹೊನ್ನಳ್ಳಿಯಲ್ಲಿ ನಾರಾಯಣ ಹಾಗೂ ನೀಲಿ ದಂಪತಿಗೆ ಜನಿಸಿದ ತುಳುಸಿ ಗೌಡ ಹುಟ್ಟಿನಿಂದಲೂ ಬಡತನದಲ್ಲಿಯೇ ಬೆಳೆದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು, ಶಾಲೆಯ ಮುಖ ನೋಡಿದವರಲ್ಲ. ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಇವರನ್ನು ಗೋವಿಂದೇ ಗೌಡ ಎಂಬುವವರಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಮಾಡಲಾಯ್ತು. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಇವರ ಮುಂದಿನ ಬದಕು ಕಷ್ಟದಿಂದಲೇ ಕೂಡಿತ್ತು.
ಕಡು ಬಡತನದಲ್ಲಿ ಹುಟ್ಟಿದ ಈ ವೃಕ್ಷಮಾತೆ ಸಾಧನೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಕನ್ನಡಿಗರ ಹೆಮ್ಮೆ, ಮರ-ಗಿಡ ನೆಡುವುದು ಅಂದ್ರೆ ಮುಖ ತಿರುಗಿಸುವ ಈ ಕಾಲದಲ್ಲಿ ತುಳಸಿ ಗೌಡ ಅವರು ಇತರ ಮಹಿಳೆಯರಿಗೆ ಮಾದರಿ ಎಂದೇ ಹೇಳಬಹುದು. ಇವರ ಪರಿಸರ ಪ್ರೇಮ ಹೀಗೆ ಮುಂದುವರೆಯಲಿ ಇನ್ನಷ್ಟು ಉನ್ನತ ಪ್ರಶಸ್ತಿಗಳು ಇವರಿಗೆ ಒಲಿದು ಬರಲಿ ಎನ್ನುತ್ತಾ, ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ವೃಕ್ಷಮಾತೆಗೆ ನಮ್ಮದೊಂದು ಸಲಾಂ ಹೇಳೋಣ.