ಕಾರವಾರ: ಚಿಕ್ಕ ವಯಸ್ಸಿನಿಂದಲೇ ಗಿಡಗಳನ್ನು ತನ್ನ ಮಕ್ಕಳಂತೆ ಬೆಳಸಿ ವೃಕ್ಷ ಮಾತೆ ಎಂದೇ ಹೆಸರು ಗಿಟ್ಟಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳುಸಿ ಗೌಡ ಅವರಿಗೆ ಪದ್ಮಶ್ರೀ ಗರಿ ಲಭಿಸಿದೆ.
ಸಾಲುಮರದ ತಿಮ್ಮಕ್ಕನಂತೆ ಚಿಕ್ಕವಯಸ್ಸಿನಿಂದಲೇ ಗಿಡಗಳನ್ನು ಮಕ್ಕಳಂತೆ ಬೆಳಸಿದ ಬಡ ಮಹಿಳೆಗೆ ದೇಶದ ಪ್ರತಿಷ್ಠಿತ ಪದ್ಮಶ್ರಿ ಪ್ರಶಸ್ತಿ ದೊರೆತಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. 1944ರಲ್ಲಿ ಹೊನ್ನಳ್ಳಿಯಲ್ಲಿ ನಾರಾಯಣ ಹಾಗೂ ನೀಲಿ ದಂಪತಿಗೆ ಜನಿಸಿದ ತುಳುಸಿ ಗೌಡ ಹುಟ್ಟಿನಿಂದಲೂ ಬಡತನದಲ್ಲಿಯೇ ಬೆಳೆದರು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ತುಳಸಿ ಗೌಡ, ಶಾಲೆಯ ಮುಖ ನೋಡಿದವರಲ್ಲ. ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಈಕೆ, ಬಳಿಕ ಗೋವಿಂದೇ ಗೌಡ ಎಂಬಾತರನ್ನು ವಿವಾಹವಾಗಿ ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡರು.
ಹೀಗೆ ಕಷ್ಟದ ಜೀವನ ಎದುರಿಸಿ ಕಟ್ಟಿಗೆ ಮಾರಾಟ ಮಾಡಿ ಜೀವನ ಸಾಗಿಸಿದ್ದಾರೆ. ಕಾಡಿನಲ್ಲಿ ಕಟ್ಟಿಗೆ ತರುವ ವೇಳೆ ಸಿಗುವ ಬೀಜಗಳನ್ನು ತಂದು ಸಸಿ ಮಾಡಿ ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ನೆಡುತ್ತಿದ್ದರು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನು ಮಾಡಿ ಕೊಡುವ ಕೆಲಸವನ್ನು ಇವರಿಗೆ ನೀಡಿತು. ಅದರಂತೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದರು. ವರ್ಷಕ್ಕೆ 30 ಸಾವಿರ ಸಸಿಗಳನ್ನು ನೆಡುತ್ತಿದ್ದು, ಇಂದು ಲಕ್ಷಾಂತರ ಮರಗಳು ಹೆಮ್ಮರವಾಗಿ ನಿಂತಿವೆ.
ಇವರ ಪರಿಸರದ ಮೇಲಿನ ಕಾಳಜಿ ನೋಡಿ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗಿಡಗಳನ್ನು ಪೋಷಿಸುವ ಕೆಲಸ ನೀಡಲಾಗಿತ್ತು. ತುಳಸಿ ಗೌಡರ ಪರಿಸರ ಪ್ರೀತಿಗೆ ಇವರನ್ನು 'ಮರಗಳ ವಿಜ್ಞಾನಿ' ಎಂದೇ ಬಣ್ಣಿಸಲಾಗುತ್ತದೆ. ಯಾವ ಯಾವ ಗಿಡಗಳನ್ನು ಯಾವ ಯಾವ ಖುತುವಿನಲ್ಲಿ ನೆಡಬೇಕು, ಎಷ್ಟು ನೀರು, ಗೊಬ್ಬರ ಕೊಡಬೇಕು, ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತದೆ ಎಂಬ ಮಾಹಿತಿ ಇವರ ಜ್ಞಾನ ಭಂಡಾರದಲ್ಲಿದೆ. ಇನ್ನು 300ಕ್ಕೂ ಹೆಚ್ಚು ಪ್ರಬೇಧದ ಮರಗಳು ಇವರಿಗೆ ಚಿರ ಪರಿಚಿತ.
ಇಂತಹ ವೃಕ್ಷಮಾತೆಗೆ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಇದು ಕಾರವಾರ ಜಿಲ್ಲೆಗೆ ಮಾತ್ರವಲ್ಲದೆ, ರಾಜ್ಯಕ್ಕೆ ಹೆಮ್ಮೆ ತಂದಿದೆ. ಹಾಲಕ್ಕಿ ಸಮುದಾಯದ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡರ ಬಳಿಕ ತುಳುಸಿ ಗೌಡಗೆ ಪದ್ಮಶ್ರೀ ಪ್ರಶಸ್ತಿ ದೊರಕುತ್ತಿರುವುದು ಹುಟ್ಟೂರಿನಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ತುಳಸಿಗೌಡರಿಗೆ ಈ ಹಿಂದೆ ಇಂದಿರಾ ಪ್ರೀಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ ಲಭಿಸಿತ್ತು. ಅಂದಿನ ಪ್ರಧಾನಿ ವಿ.ಪಿ. ಸಿಂಗ್ ರಿಂದ ಪ್ರಶಸ್ತಿ ಪಡೆಯುವ ಮೂಲಕ ಹಾಲಕ್ಕಿ ಸಮುದಾಯದ ಮಹಿಳೆ ದೇಶದ ಗಮನ ಸೆಳೆದಿದ್ದರು.