ಕಾರವಾರ: ಉತ್ತರಕನ್ನಡದ ದಾಂಡೇಲಿ, ಜೊಯಿಡಾ ಅಂತಂದ್ರೆ ಪ್ರವಾಸಿಗರಿಗೆ ಪಂಚಪ್ರಾಣ. ಇಲ್ಲಿನ ಅರಣ್ಯ, ಪರಿಸರ ಪ್ರವಾಸೋದ್ಯಮ, ಜಲಸಾಹಸ ಕ್ರೀಡೆಗಳೇ ಈ ಎರಡೂ ತಾಲೂಕುಗಳ ಆದಾಯದ ಮೂಲ ಆಧಾರ. ಆದರೆ, ಕೆಲ ಹಪಹಪಿ ಪ್ರವಾಸೋದ್ಯಮಿಗಳಿಂದಾಗಿ ಜಲಸಾಹಸಕ್ರೀಡೆಯ ನೆಪದಲ್ಲಿ ಪ್ರವಾಸಿಗರನ್ನು ಅಪಾಯಕ್ಕೆ ನೂಕುವ ಕಾರ್ಯಗಳೂ ನಡೆಯುತ್ತಿವೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚಿಗೆ ಪ್ರವಾಸಿಗರನ್ನು ಹೊತ್ತೊಯ್ದಿದ್ದ ರ್ಯಾಫ್ಟ್ ನದಿಮಧ್ಯೆ ಸಿಲುಕಿ ಪ್ರವಾಸಿಗರು ಅಪಾಯ ಎದುರಿಸುವಂತಾಗಿತ್ತು.
ರ್ಯಾಫ್ಟಿಂಗ್‌ಗೆಂದು ತೆರಳಿದ್ದ ವೇಳೆ ಕಾಳಿ ನದಿ ಮಧ್ಯದಲ್ಲಿ ಪ್ರವಾಸಿಗರು ಅಪಾಯಕ್ಕೆ ಸಿಲುಕಿ ಅದೃಷ್ಟವಶಾತ್ ಬದುಕಿ ಬಂದ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯ ಇಳವಾ ಎಂಬಲ್ಲಿ ನಡೆದಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಜೋಯಿಡಾ, ದಾಂಡೇಲಿಯತ್ತ ಬರುತ್ತಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಹೀಗೆ ಪ್ರವಾಸಕ್ಕೆಂದು ಇಲ್ಲಿನ ರೆಸಾರ್ಟ್‌ಗೆ ಆಗಮಿಸಿದ್ದ ದಾವಣಗೇರಿ ಮೂಲದ 14 ಮಂದಿ ಪ್ರವಾಸಿಗರ ತಂಡವೊಂದು ರ್ಯಾಫ್ಟಿಂಗ್ ಮಾಡಲು ಬೋಟ್ ಏರಿ ಹೊರಟಿದ್ದಾರೆ. 8 ಮಂದಿ ತೆರಳಬೇಕಾದ ಬೋಟ್‌ನಲ್ಲಿ 14 ಮಂದಿಯನ್ನ ತುಂಬಿಕೊಂಡು ಹೋದ ಪರಿಣಾಮ ನದಿಯ ಮಧ್ಯದಲ್ಲಿಯೇ ಬೋಟ್ ಸಿಕ್ಕಿಹಾಕಿಕೊಂಡು ಮುಂದೆ ಸಾಗದೇ ಅಪಾಯಕ್ಕೆ ಸಿಲುಕಿದೆ.
ಪರಿಣಾಮ ಪ್ರವಾಸಿಗರು ನದಿಗೆ ಬೀಳುವ ಹಂತದಲ್ಲಿದ್ದಾಗ ಅದೃಷ್ಟವಶಾತ್ ಇತರೆ ಬೋಟ್‌ನಲ್ಲಿದ್ದವರು, ರ್ಯಾಫ್ಟ್ ಸಿಬ್ಬಂದಿ ಪ್ರವಾಸಿಗರನ್ನು ರಕ್ಷಿಸಿ ಇನ್ನೊಂದು ರ್ಯಾಫ್ಟ್ ಸಹಾಯದಿಂದ ದಡಕ್ಕೆ ಕರೆತಂದಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಲೈಫ್ ಜಾಕೆಟ್ ಹಾಕಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕೆಲ ರೆಸಾರ್ಟ್‌ನವರು ಅಧಿಕೃತವಾಗಿ ಅನುಮತಿ ಪಡೆದು ರ್ಯಾಫ್ಟ್ ನಡೆಸಿದರೆ, ಇನ್ನು ಕೆಲವರು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ನಡೆಸುತ್ತಿದ್ದಾರೆ. ಒಂದೊಮ್ಮೆ ರ್ಯಾಫ್ಟ್ ನಡೆಸುವ ವೇಳೆ ಅನಾಹುತವಾದರೆ ಯಾರು ಹೊಣೆ? ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಜೆಡಿಎಸ್ ಕೇವಲ ಒಂದು ಕುಟುಂಬ, ವರ್ಗದ ಪಕ್ಷವಲ್ಲ : ಮಿಷನ್ '123' ಅನುಷ್ಠಾನಕ್ಕೆ ಬರುತ್ತದೆ ಎಂದ ದೇವೇಗೌಡರು