ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಿಂದ ನಿತ್ಯ ಗೋವಾಕ್ಕೆ ನೂರಾರು ಜನ ಕೆಲಸಕ್ಕೆ ತೆರಳುತ್ತಾರೆ. ಗೋವಾಕ್ಕೆ ತೆರಳುವವರಿಗೆ ರೈಲ್ವೆಯೇ ಪ್ರಮುಖ ಆಧಾರ. ಆದರೆ ಗೋವಾಕ್ಕೆ ತೆರಳುವ ಮೆಮು ರೈಲು ಎಲ್ಲಾ ರೈಲು ನಿಲ್ದಾಣದಲ್ಲಿ ನಿಲ್ಲಿಸದಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಪದ್ಮಶ್ರಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ನೇತೃತ್ವದಲ್ಲಿ ರೈಲು ತಡೆದು ಹೋರಾಟಕ್ಕೆ ಸಾರ್ವಜನಿಕರು ಮುಂದಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಗೋವಾ ಗಡಿ ಭಾಗ ಜಿಲ್ಲೆಯಾಗಿದ್ದು ಜಿಲ್ಲೆಯ ಕರಾವಳಿ ಭಾಗದ ನೂರಾರು ಯುವಕರು ಪ್ರತಿನಿತ್ಯ ಗೋವಾಕ್ಕೆ ಕೆಲಸಕ್ಕೆ ಓಡಾಡುತ್ತಾರೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಓಡಾಟ ನಡೆಸುವುದರಿಂದ ಪ್ರತಿನಿತ್ಯ ಸುಲಭವಾಗಿ ಓಡಾಟ ನಡೆಸುತ್ತಾರೆ. ಮಂಗಳೂರು-ಮಡಗಾಂವ್ ಮಾರ್ಗವಾಗಿ ತೆರಳುವ ಮೆಮು ರೈಲು, ಈ ಭಾಗ ಕೆಲಸಕ್ಕೆ ತೆರಳುವ ಯುವಕರಿಗೆ ಆಧಾರವಾಗಿದೆ.
ಈ ಹಿಂದೆ ಮೆಮು ರೈಲು ಪ್ಯಾಸೇಂಜರ್ ರೈಲಾಗಿದ್ದು ಎಲ್ಲ ನಿಲ್ದಾಣಗಳಲ್ಲೂ ನಿಲ್ಲಿಸಲಾಗುತ್ತಿತ್ತು. ಆದರೆ, ಕೋವಿಡ್ ನಂತರ ಮೆಮು ರೈಲನ್ನು ಎಕ್ಸಪ್ರೆಸ್ ರೈಲನ್ನಾಗಿ ಮಾಡಿದ್ದು ಕರಾವಳಿ ಭಾಗದ ಹಾರವಾಡ, ಮಿರ್ಜಾನ್ ಹಾಗೂ ಚಿತ್ರಾಪುರದಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದ ನೂರಾರು ಯುವಕರು ಗೋವಾಕ್ಕೆ ಕೆಲಸಕ್ಕೆ ತೆರಳಲು ಪರದಾಟ ನಡೆಸಿದ್ದಾರೆ. ಅಲ್ಲದೇ ಎಕ್ಸಪ್ರೆಸ್ ರೈಲು ಎಂದು ದುಬಾರಿ ಟಿಕೇಟ್ ದರ ನಿಗದಿ ಮಾಡಿರುವುದು ಪ್ರತಿನಿತ್ಯ ಓಡಾಡುವವರಿಗೆ ಸಮಸ್ಯೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪದ್ಮಶ್ರಿ ಪುರಸ್ಕೃತ ಸುಕ್ರಿಬೊಮ್ಮ ಗೌಡ ಹಾಗೂ ತುಳಸಿ ಗೌಡ ನೇತೃತ್ವದಲ್ಲಿ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ರೈಲು ತಡೆದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ರೈಲ್ವೆ ಜೊತೆಗೆ ಸೇರ್ಪಡೆಗೆ ಒತ್ತಾಯ: ಈ ವೇಳೆ ಮಾತನಾಡಿದ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವಕರ್, ಕೊಂಕಣ ರೈಲ್ವೆಯಿಂದ ಕಳೆದ 30 ವರ್ಷಗಳಿಂದ ರೈಲು ಸಂಚಾರ ನಡೆಸಲಾಗುತ್ತಿದೆ. ಆದರೆ, ಕೊಂಕಣ ರೈಲ್ವೆಯಿಂದ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. 30 ವರ್ಷವಾದರೂ ರಾಜ್ಯಕ್ಕೆ ಅಗತ್ಯವಾದ ರೈಲು, ಹಳಿ, ಕೆಲಸ ಕೂಡ ಕೊಡುತ್ತಿಲ್ಲ. ಹೀಗಿರುವಾಗ ಈ ಕೊಂಕಣ ರೈಲ್ವೆಯನ್ನು ಇಂಡಿಯನ್ ರೈಲ್ವೆ ಜೊತೆಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ.
ಇದರ ನಡುವೆ ಕಳೆದ ಹಲವು ವರ್ಷಗಳ ಹಿಂದಿನಿಂದಲೂ ಮಂಗಳೂರು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲನ್ನು ಮೆಮು ಎಕ್ಸ್ಪ್ರೆಸ್ ಆಗಿ ಮೇಲ್ದರ್ಜೆಗೆ ಏರಿಸಿ ಹೆಚ್ಚು ಹಣ ವಸೂಲಿ ಮಾಡುತ್ತಿರುವುದಲ್ಲದೇ ಕೆಲವೇ ಕೆಲವು ಸ್ಟೇಷನ್ಗಳಲ್ಲಿ ಮಾತ್ರ ನಿಲುಗಡೆ ಮಾಡಲಾಗುತ್ತಿದೆ. ನಾವು ಪ್ರತಿನಿತ್ಯ ಶಿಕ್ಷಣ, ವ್ಯಾಪಾರ, ವ್ಯವಹಾರ, ಉದ್ಯೋಗಕ್ಕಾಗಿ ಗೋವಾ ಮಂಗಳೂರು ಕಡೆ ಹೆಚ್ಚು ತೆರಳುವುದರಿಂದ ಈ ರೈಲನ್ನು ಮೊದಲಿನಂತೆಯೇ ನಿಲುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು, ಕೊಂಕಣ ರೈಲ್ವೆ ನಿಲ್ದಾಣಕ್ಕೆ ಭೂಮಿ ನೀಡಿದವರಿಗೆ ಹೆಚ್ಚುವರಿ ಪರಿಹಾರ ಕೇಳಿ 32 ವರ್ಷವಾದರೂ ಇಂದಿಗೂ ಪರಿಹಾರ ನೀಡಿಲ್ಲ. ಈ ನಿಟ್ಟಿನಲ್ಲಿ ಭೂಮಿ ನೀಡಿದ ಜನರಿಗೆ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ ಹಾರವಾಡ ರೈಲ್ವೆ ನಿಲ್ದಾಣದಿಂದ ಪ್ರತಿನಿತ್ಯ ಗೋವಾಕ್ಕೆ ಹಾಗೂ ಮಂಗಳೂರಿಗೆ ನೂರಾರು ಜನರು ಓಡಾಟ ನಡೆಸುತ್ತಿದ್ದು, ಪ್ಲಾಟ್ ಫಾರಂ ಸರಿಯಾಗಿ ಇಲ್ಲ. ಈ ಕಾರಣದಿಂದ ಹಲವರು ಪ್ಲಾಟ್ ಫಾರಂ ನಿಂದ ಬಿದ್ದು ಗಾಯಗೊಂಡಿದ್ದು, ಹಾರವಾಡ ರೈಲ್ವೆ ನಿಲ್ದಾಣ ಕೇವಲ ಕ್ರಾಸಿಂಗ್ ಮಾಡಲು ಮಾತ್ರ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು ಪ್ಲಾಟ್ ಫಾರಂ ಸರಿಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಹೆಚ್ಚುವರಿ ಭೂ ಪರಿಹಾರಕ್ಕೆ ಆಗ್ರಹ: ಈ ವೇಳೆ ಮಾತನಾಡಿದ ಮಾಜಿ ಶಾಸಕ ಸತೀಶ್ ಸೈಲ್, ಹಾರವಾಡದಲ್ಲಿ ಈ ಹಿಂದಿನಂತೆ ರೈಲು ನಿಲುಗಡೆಗೆ ಮತ್ತು ಇಲ್ಲಿನ ರೈಲ್ವೆ ನಿಲ್ದಾಣವನ್ನು ಸರಿಪಡಿಸಲು ರೈಲು ತಡೆದು ಪ್ರತಿಭಟನೆ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು. ಇನ್ನು 10 ದಿನದಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಮಿರ್ಜಾನ್ ನಲ್ಲಿಯು ನಿಲುಗಡೆಗೆ ಒತ್ತಾಯಿಸಲಾಗಿದೆ. ಅಲ್ಲದೇ ಕಳೆದ 30 ವರ್ಷದಿಂದ ಹೆಚ್ಚುವರಿ ಭೂ ಪರಿಹಾರಕ್ಕೆ ಒತ್ತಾಯಿಸುತ್ತಿದ್ದು ಕೂಡಲೇ ಈ ಬಗ್ಗೆಯೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಸೈಲ್ ಆಗ್ರಹಿಸಿದರು.
ರೈಲು ತಡೆದು ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ಥಳಕ್ಕೆ ಕೊಂಕಣ ರೈಲ್ವೆ ಇಲಾಖೆ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರನ್ನ ಮನವೊಲಿಸಿ ಇನ್ನು 10 ದಿನದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಒಟ್ಟಿನಲ್ಲಿ ಕೊಂಕಣ ರೈಲ್ವೆ ಸಮಸ್ಯೆ ವಿರುದ್ಧ ಕರಾವಳಿ ಭಾಗದಲ್ಲಿ ಬಹಳ ದಿನಗಳ ನಂತರ ಹೋರಾಟ ನಡೆದಿದ್ದು, ಇಳಿ ವಯಸ್ಸಿನಲ್ಲಿ ಜನರ ಸಮಸ್ಯೆಗಾಗಿ ಪದ್ಮಶ್ರಿದ್ವಯರು ಹೋರಾಟಕ್ಕೆ ಇಳಿದಿದ್ದು ನಿಜಕ್ಕೂ ವಿಶೇಷ ಎನಿಸಿತ್ತು.
ಇದನ್ನೂ ಓದಿ: ಪ್ರಾಣ ರಕ್ಷಿಸಿದ ಲೈಫ್ ಗಾರ್ಡ್ ಮೇಲೆಯೇ ಹಲ್ಲೆ: ಮದ್ಯದ ಅಮಲಿನಲ್ಲಿ ಪ್ರವಾಸಿಗರ ರಂಪ