ಭಟ್ಕಳ: ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಬಾಧಿತರಿಗೆ ಸೇವೆ ಒದಗಿಸುತ್ತಿರುವ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳುಗಳಿಂದ ಬಾಕಿ ಇರುವ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಸಿಲ್ಲ. ಹೀಗಾಗಿ ಹಣ ಪಾವತಿಸಲು ಸೂಚಿಸುವಂತೆ ಕೋರಿ ಸ್ಕೊಡ್‍ವೆಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಎಂಡೋ ಸಲ್ಫಾನ್ ಸಂಚಾರಿ ಆರೋಗ್ಯ ಘಟಕಗಳ ವೈದ್ಯಕೀಯ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳನ್ನು ನಿನ್ನೆ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸ್ಕೊಡ್‍ವೆಸ್ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟೇಶ ನಾಯ್ಕ ಹಾಗೂ ಎಂಡೋ ಸಲ್ಫಾನ್ ಸಂಚಾರಿ ಆರೋಗ್ಯ ಘಟಕಗಳ ವೈದ್ಯಕೀಯ ಸಿಬ್ಬಂದಿ ಗುರುವಾರದಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಅವರ ಶಿರಾಲಿಯ ಕಾರ್ಯಾಲಯಕ್ಕೆ ಭೇಟಿ ನೀಡಿ 7 ತಿಂಗಳುಗಳಿಂದ ಬಾಕಿ ಇರುವ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಸುವಂತೆ ಸರ್ಕಾರದ ಗಮನ ಸೆಳೆಯಲು ಮನವಿ ಮಾಡಿದರು. ಈ ವೇಳೆ, ಅವರು ತಹಶೀಲ್ದಾರರು ಹಾಗೂ ತಾಲೂಕು ಆರೋಗ್ಯಾಧಿಕಾರಿ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಎಂಡೋಸಲ್ಫಾನ್ ಬಾಧಿತರಿಗೆ ಸೇವೆ ನೀಡುತ್ತಿರುವ ಸ್ಕೊಡ್‍ವೆಸ್ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳುಗಳಿಂದ ಅನುದಾನ ಬಿಡುಗಡೆಯಾಗದೇ ಇರುವುದನ್ನು ಶಾಸಕರ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಮನವಿಯನ್ನು ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಎಂಡೋಸಲ್ಪಾನ್ ಬಾಧಿತರಿಗೆ ಸೌಲಭ್ಯ ಒದಗಿಸುವಲ್ಲಿ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು, ಅನುದಾನ ಬಿಡುಗಡೆಗೆ ಅಡ್ಡಿ ಮಾಡುತ್ತಿರುವುದು, ವೇತನ ಪಾವತಿಸಲು ಅನಾರೋಗ್ಯಕರ ಬೇಡಿಕೆ ಸಲ್ಲಿಸುತ್ತಿರುವ ವಿಷಯದ ಬಗ್ಗೆಯೂ ಮನವಿಯಲ್ಲಿ ದಾಖಲಿಸಿ ಅಗತ್ಯ ಕಾನೂನು ಕ್ರಮಕ್ಕೆ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಸುಮಾರು 2000 ಎಂಡೋಪೀಡಿತರೂ ಸೇರಿದಂತೆ ಸುಮಾರು ಸುಮಾರು 65,000 ಕ್ಕೂ ಹೆಚ್ಚು ರೋಗಿಗಳಿಗೆ ಈ ಸಂಚಾರಿ ಆರೋಗ್ಯ ಘಟಕಗಳಿಂದ ಸೇವೆ ಒದಗಿಸಲಾಗಿದ್ದು, ವೈದ್ಯರು, ಫಿಜಿಯೋಥೆರಪಿಸ್ಟ್, ಸ್ಟಾಫ್‍ನರ್ಸ್‍ಗಳು, ಆರೋಗ್ಯ ಸಹಾಯಕರು ಸೇರಿದಂತೆ 6 ಜನರ ವೈದ್ಯಕೀಯ ತಂಡ ನಿತ್ಯ ಎಂಡೋಸಲ್ಪಾನ್ ಬಾಧಿತರ ಸೇವೆಯಲ್ಲಿ ತೊಡಗಿದ್ದರೂ ನಿಯಮಾನುಸಾರ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಯಾಗದೇ ಇರುವುದರಿಂದ ಸದರಿ ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ಕಳೆದುಕೊಂಡ ವೈದ್ಯಕೀಯ ತಂಡಗಳು ಎಂಡೋಸಲ್ಫಾನ್ ಬಾಧಿತರ ವೇತನ ಪಾವತಿಯಾಗುವವರೆಗೆ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿ ಮನವಿ ಸಲ್ಲಿಸಿದರು.
ಉತ್ತರಕನ್ನಡ ಜಿಲ್ಲೆಯಲ್ಲಿಯೇ ಹೆಚ್ಚಿನ ಸಂಖ್ಯೆಯ ಎಂಡೋಸಲ್ಫಾನ್ ಬಾಧಿತರು ಭಟ್ಕಳ ತಾಲೂಕಿನಲ್ಲಿದ್ದು, ಎಂಡೋಸಲ್ಫಾನ್ ಸಂಚಾರಿ ಆರೋಗ್ಯ ಘಟಕಗಳಿಂದ ಮನೆ ಬಾಗಿಲಲ್ಲೇ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಸ್ಕೊಡ್ ವೆಸ್ ಸಂಸ್ಥೆಯವರು ಉತ್ತಮವಾಗಿ ಸೇವೆ ಒದಗಿಸುತ್ತಿದ್ದಾರೆ. ಕಳೆದ 7 ತಿಂಗಳಿಂದ ವೇತನ ಅನುದಾನ ಬಿಡುಗಡೆಯಾಗದೇ ಇರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಗೆ ಈ ಸೇವೆ ಅತ್ಯಂತ ಅವಶ್ಯಕವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಿ ಇನ್ನು 15 ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಸುನೀಲ ನಾಯ್ಕ ಭರವಸೆ ನೀಡಿದರು.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ದೇಶನದಂತೆ ಎಂಡೋಸಲ್ಫಾನ್ ಬಾಧಿತರಿಗೆ ಪ್ರಾಮಾಣಿಕ ಸೇವೆ ಒದಗಿಸಲಾಗುತ್ತಿದೆ. ಸಕಾಲದಲ್ಲಿ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಯಾಗದಿದ್ದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅಲ್ಲದೇ ಉತ್ತಮ ಸೇವೆ ಒದಗಿಸಲೂ ಸಹ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಚಿವರಿಗೆ ಮನವಿ ನೀಡಲಾಗುತ್ತಿದ್ದು, ಅವರ ಸಲಹೆ ಸೂಚನೆಯನ್ನಾಧರಿಸಿ ಎಂಡೋಬಾಧಿತರ ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಮುಂದುವರಿಸುವ ಅಥವಾ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದರು.