ಕಾರವಾರ: ಜಿಲ್ಲೆಯ ಗೋವಾ-ಕರ್ನಾಟಕದ ಗಡಿಯಿಂದ ಭಟ್ಕಳದವರೆಗೆ ಹೆದ್ದಾರಿ ಕೆಲಸ ಬಹುತೇಕ ಅರೆಬರೆಯಾಗಿದ್ದರೂ, ಶೇ.75 ರಷ್ಟು ಪೂರ್ಣಗೊಂಡಿದೆ ಎಂದು ಟೋಲ್ ಆರಂಭಿಸಿ ವಾಹನ ಸವಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ಇದೀಗ ಸುರತ್ಕಲ್ ಬಳಿ ಟೋಲ್ ಸಂಗ್ರಹ ನಿಲ್ಲಿಸಲು ಸೂಚನೆ ಬಂದಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಟೋಲ್ ಕೈಬಿಡಬೇಕೆನ್ನುವ ಆಗ್ರಹ ಕೇಳಿಬರುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಕರ್ನಾಟಕ ಗೋವಾ ಗಡಿ ಮಾಜಾಳಿಯಿಂದ ಭಟ್ಕಳದ ಗಡಿಯವರೆಗೆ ಸುಮಾರು 187 ಕಿಮೀ ನಷ್ಟು ಹೆದ್ದಾರಿಯನ್ನು ಚತುಷ್ಪಥಕ್ಕೇರಿಸುತ್ತಿದ್ದು ಇದುವರೆಗೂ ಸಹ ಹೆದ್ದಾರಿ ಕಾಮಗಾರಿ ಪ್ರಗತಿ ಹಂತದಲ್ಲೇ ಇದೆ. ಕೆಲವೆಡೆ ರಸ್ತೆಯನ್ನು ನಿರ್ಮಾಣ ಮಾಡಿಲ್ಲ. ಬಹುತೇಕ ಕಡೆಗಳಲ್ಲಿ ಅರ್ಧದಷ್ಟು ಮಾತ್ರ ಕಾಮಗಾರಿ ಮಾಡಿಬಿಡಲಾಗಿದೆ. ಹೀಗಾಗಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಡೈವರ್ಷನ್‌ಗಳನ್ನು ಹಾಕಲಾಗಿದ್ದು, ಸವಾರರು ಸಂಚರಿಸಲು ಪರದಾಡುವಂತಾಗಿದೆ. ಇದರ ನಡುವೆಯೇ ಕಳೆದೊಂದು ವರ್ಷದಿಂದ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಬಳಿ ಹೆದ್ದಾರಿಗೆ ಟೋಲ್ ನಿರ್ಮಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.
ನಿಯಮದಂತೆ, ಹೆದ್ದಾರಿ ಕಾಮಗಾರಿ ಶೇ 75 ರಷ್ಟು ಪೂರ್ಣಗೊಂಡ ಬಳಿಕವಷ್ಟೇ ಟೋಲ್ ಸಂಗ್ರಹಿಸಬೇಕು. ವಾಹನಗಳ ಸಂಚಾರಕ್ಕೆ ರಸ್ತೆ ಸುಗಮವಾಗಿರಬೇಕು. ಆದರೆ ಕಾರವಾರದಿಂದ ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ಧದಷ್ಟೂ ಸಹ ಪೂರ್ಣಗೊಂಡಿಲ್ಲ. ಆದರೂ ಹಟ್ಟಿಕೇರಿ ಬಳಿ ಟೋಲ್ ನಿರ್ಮಾಣ ಮಾಡಿ ಜನರಿಂದ ಹಣ ವಸೂಲಿ ಮಾಡುತ್ತಿದ್ದು ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕುಂದಾಪುರ ಗಡಿಯಿಂದ ಗೋವಾ ಗಡಿಯವರೆಗಿನ ಹೆದ್ದಾರಿ ಅಗಲೀಕರಣದಲ್ಲಿ ಭಟ್ಕಳದಿಂದ ಕಾರವಾರ ತಾಲೂಕಿನ ನಡುವೆ ಒಟ್ಟು 187.240 ಕಿಲೋಮೀಟರ್ ರಸ್ತೆ ನಿರ್ಮಾಣವಾಗಬೇಕಿದೆ. 2014ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು ಇದುವರೆಗೆ ಶೇ 60 ರಷ್ಟೂ ಕಾಮಗಾರಿ ಮುಗಿದಿಲ್ಲ.
ಈ ಕುರಿತು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಐಆರ್‌ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಲೇಜಿನ ಕಾರ್ಯಕ್ರಮದಲ್ಲಿ ಬುರ್ಖಾ ಧರಿಸಿ ನೃತ್ಯ: ನಾಲ್ವರು ವಿದ್ಯಾರ್ಥಿಗಳ ಅಮಾನತು