ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಮೂರು ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಕಳ್ಳತನ ಮಾಡಿದ್ದ ನೇಪಾಳ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಲಿ ಹಳಿಯಾದಲ್ಲಿ ವಾಸವಿದ್ದು, ವಾಚ್ಮನ್ ಕೆಲಸ ಮಾಡುತ್ತಿದ್ದ ಜಯಸಿಂಗ್ ಛೇತಿ, ಕಾರವಾರದ ಲಕ್ಕಿ ಹೋಟೆಲ್‌ನಲ್ಲಿ ಚೈನೀಸ್ ಫಾಸ್ಟ್ ಫುಡ್ ಕುಕ್ ಆಗಿ ಕೆಲಸಕ್ಕಿದ್ದ ಪ್ರಕಾಶ ಸೌದ್, ಕಾರವಾರದ ವೆಲ್ಕಮ್ ಡೈನ್ ಹೋಟೆಲ್‌ನಲ್ಲಿ ಕ್ಯಾಷಿಯರ್-ವೈಟರ್ ಕೆಲಸ ಮಾಡುತ್ತಿದ್ದ ಶ್ಯಾಮ್ ಸೌದ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ 3 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ: ಮಾರ್ಚ್ 1 ರಂದು ಮಧ್ಯರಾತ್ರಿ ಪಟ್ಟಣದ ಕೆಎಲ್‌ಇ ರಸ್ತೆಯಲ್ಲಿರುವ ಪಿಕಾಕ್ ಬಾರ್ ಅಂಡ್ ರೆಸ್ಟೋರೆಂಟ್‌ನ ಹಿಂಬದಿಯ ಕಬ್ಬಿಣದ ತಂತಿಯ ಜಾಲರಿಯನ್ನು ತುಂಡರಿಸಿ ಒಳ ಪ್ರವೇಶಿಸಿದ್ದರು. ಅಡುಗೆ ಕೋಣೆಯ ಬಾಗಿಲು ಮುರಿದು, ಕ್ಯಾಷ್ ಕೌಂಟರ್‌ನಲ್ಲಿದ್ದ 95 ಸಾವಿರ ರೂ. ನಗದನ್ನು ಮತ್ತು 6,500 ರೂ. ಮೌಲ್ಯದ ವಿವಿಧ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದರು.
ಈ ಪ್ರಕರಣ ಸಂಬಂಧ ಪೊಲೀಸರು ತಂಡ ರಚಿಸಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು. ಆರೋಪಿಗಳ ಸುಳಿವು ಸಿಗುತ್ತಲೇ ಅವರನ್ನು ಬಂಧಿಸಿ, ಸತ್ಯ ಬಾಯಿ ಬಿಡಿಸಿದ್ದಾರೆ. ಆಗ ಅಂಕೋಲಾದ ಜೊತೆಗೆ ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಣ ಪ್ಯಾಲೇಸ್ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಮೌರ್ಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹಿಂದೂಗಳಲ್ಲದವರಿಗೆ ದೇವಾಲಯ ಜಾಗ ಗುತ್ತಿಗೆ ನೀಡತಕ್ಕದ್ದಲ್ಲ: ಸಿಎಂಗೆ ಪತ್ರ ಬರೆದ ಬೋಪಯ್ಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ.ಪೆನ್ನೇಕರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ ಎಸ್ ಹಾಗೂ ಕಾರವಾರ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪ್ರೇಮನಗೌಡ ಪಾಟೀಲ್, ಪ್ರವೀಣಕುಮಾರ್ ಆರ್ ಹಾಗೂ ಸಿಬ್ಬಂದಿ ಪರಮೇಶ ಎಸ್, ಮಂಜುನಾಥ ಲಕ್ಕಾಪುರ, ಭಗವಾನ ಗಾಂವಕರ್ ರೋಹಿದಾಸ ದೇವಾಡಿಗ, ಆಸಿಫ್ ಆರ್.ಕೆ. ಶ್ರೀಕಾಂತ ಕೆ ಹಾಗೂ ಜಿಲ್ಲಾ ಟೆಕ್ನಿಕಲ್ ಸೆಲ್ ವಿಭಾಗದ ಸುಧೀರ ಮಡಿವಾಳ ಹಾಗೂ ರಮೇಶ ನಾಯಕ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.