ಶಿರಸಿ: ದೀಪಾವಳಿ ಸಂಭ್ರಮದ ನಡುವೆ ಒಂದೇ ಮನೆಯಲ್ಲಿ ಮೂರು ಜನ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ. ಪುತ್ರ ಅನಾರೋಗ್ಯದಿಂದ ಸಾವಿಗೀಡಾದ ನೋವಿನಲ್ಲಿ ತಾಯಿ ಹಾಗೂ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಹಿನ್ನೆಲೆ ಯುವಕ ಉದಯ ಬಾಲಚಂದ್ರ ಹೆಗಡೆ (22) ತನ್ನ ಮನೆಯಲ್ಲೇ ಇಂದು ಬೆಳಗ್ಗೆ ಸಾವಿಗೀಡಾಗಿದ್ದಾನೆ.
ಪುತ್ರನ ಮೃತದೇಹದ ಪಕ್ಕದಲ್ಲೇ ಕುಳಿತು ತಾಯಿ ಹಾಗೂ ಸಹೋದರಿ ಕಣ್ಣೀರು ಹಾಕುತ್ತಿದ್ದರು. ಕೆಲ ಹೊತ್ತಲ್ಲೇ ಈ ನೋವನ್ನು ತಾಳಲಾರದೆ ಮನೆಯೊಳಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ದಿವ್ಯಾ ಬಾಲಚಂದ್ರ ಹೆಗಡೆ (25) ಆತ್ಮಹತ್ಯೆ ಮಾಡಿಕೊಂಡವರು. ಕೊರೊನಾ ಸಂದರ್ಭದಲ್ಲಿ ಆನಾರೋಗ್ಯ ಕಾಡಿದ್ದರಿಂದ ಉದಯ ಬಾಲಚಂದ್ರ ಹೆಗಡೆ ಬೆಂಗಳೂರಿನಿಂದ ಊರಿಗೆ ಹಿಂತಿರುಗಿದ್ದ. ಬಳಿಕ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಮನೆ ಮಗನ ಸಾವು ಕಂಡು ನೋವಿನಿಂದ ತಾಯಿ ಹಾಗೂ ಸಹೋದರಿ ಸಾವಿನ ಹಾದಿ ಹಿಡಿದಿದ್ದಾರೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಪೋಷಕರ ಬುದ್ಧಿವಾದಕ್ಕೆ ಮನನೊಂದು 14 ವರ್ಷದ ಬಾಲಕ ಆತ್ಮಹತ್ಯೆ
ಪೋಷಕರು ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 14ರ ಬಾಲಕ: ಆಟ ಆಡುತ್ತಿದ್ದ ಮಗನಿಗೆ ಜಾಸ್ತಿ ಹೊರಗಡೆ ತಿರುಗಾಡಬೇಡ, ಓದಿನ ಕಡೆಯೂ ಗಮನ ಹರಿಸು ಎಂದು ಎಂದು ಪೋಷಕರು ಬುದ್ಧಿವಾದ ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
14 ವರ್ಷದ ಬಾಲಕ ತಮ್ಮ ಮನೆಯ ಮಹಡಿಯ ಮೇಲಿನ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ ಎಂದು ಮಗನನ್ನು ಕಳೆದುಕೊಂಡ ಪೋಷಕರು ದಿಗ್ಭ್ರಾಂತಾರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಾಲಕ ಮೂಡಲಲಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.