ಕಾರವಾರ (ಉತ್ತರ ಕನ್ನಡ) : ಬಾವಿಗೆ ಬಿದ್ದಿದ್ದ ಪಂಪ್ ಎತ್ತಲು ಇಳಿದ ವ್ಯಕ್ತಿ ಹಿಂತಿರುಗಿ ಬಾರದ ಹಿನ್ನೆಲೆ ರಕ್ಷಣೆಗೆ ಮುಂದಾದ ಇಬ್ಬರು ಸೇರಿ ಒಟ್ಟು ಮೂvರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಕಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೋವಿಂದ ಸೋಮಯ್ಯ ಪೂಜಾರಿ, ಗಣೇಶ್ ರಾಮದಾಸ್ ಶೇಟ್, ಸುರೇಶ್ ನಾಯರ್ ಬಾವಿಗೆ ಬಿದ್ದು ಮರಣ ಹೊಂದಿದವರು ಎಂಬುದು ತಿಳಿದುಬಂದಿದೆ. ಬಾವಿಯಲ್ಲಿ ಬಿದ್ದಿದ್ದ ನೀರೆತ್ತುವ ಪಂಪ್ ಸೆಟ್ ತೆಗೆಯಲು ಬಾವಿಗೆ ಇಳಿದಿದ್ದ ವ್ಯಕ್ತಿ ಮೇಲಕ್ಕೆ ಬಾರದ ಹಿನ್ನೆಲೆ ಇಬ್ಬರು ರಕ್ಷಣೆಗೆ ಮುಂದಾಗಿದ್ದರು. ಆದರೆ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಯಲ್ಲಾಪುರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತದಾನಕ್ಕೆ ತೆರಳಿದ್ದ ಮೀನುಗಾರರು- ದಡಕ್ಕೆ ಬಂದು ಸಿಲುಕಿಕೊಂಡ ಮೀನುಗಾರಿಕಾ ಬೋಟ್ : ಇನ್ನೊಂದೆಡೆ ಮೀನುಗಾರರು ಮತದಾನಕ್ಕೆ ತೆರಳಿದ್ದ ವೇಳೆ ಮೀನುಗಾರಿಕಾ ಬೋಟೊಂದು ಗಾಳಿ ರಭಸಕ್ಕೆ ದಡಕ್ಕೆ ಬಂದು ಸಿಲುಕಿಕೊಂಡಿರುವ ಘಟನೆ ಕಾರವಾರದ ಟ್ಯಾಗೋರ್ ಬೀಚ್ ಬಳಿ ನಡೆದಿದೆ.
ಮಲ್ಪೆ ಮೂಲದ ಕೆಲ ಪರ್ಷಿಯನ್ ಬೋಟುಗಳು ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದವು. ಈ ಬೋಟುಗಳಲ್ಲಿ ಜಿಲ್ಲೆಯ ಭಟ್ಕಳ, ಹೊನ್ನಾವರ ಹಾಗೂ ಕುಮಟಾದ ಸುಮಾರು ನೂರಾರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ ಬುಧವಾರ ಮತದಾನದ ಹಿನ್ನೆಲೆಯಲ್ಲಿ ಮತ ಚಲಾವಣೆಗಾಗಿ ಹತ್ತಿರದ ಬೈತಖೋಲ್ ಬಂದರಿಗೆ ಆಗಮಿಸಿದ್ದ ಮೀನುಗಾರರು ನಗರದಿಂದ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ತೆರಳಿ ಮತದಾನ ಮಾಡಿದ್ದರು. ಆದರೆ ಇದೇ ವೇಳೆಗೆ ಹಡಗೊಂದು ವಾಣಿಜ್ಯ ಬಂದರಿಗೆ ಆಗಮಿಸಿದ ಕಾರಣ ಬೋಟ್ನಲ್ಲಿದ್ದ ಡ್ರೈವರ್ ಬೋಟುಗಳನ್ನು ದಡದಂಚಿಗೆ ತಂದಿದ್ದರು ಎನ್ನಲಾಗಿದೆ.
ಸಮುದ್ರ ತೀರಕ್ಕೆ ಬಂದು ಅಪ್ಪಳಿಸಿದ ಬೋಟುಗಳು: ಆದರೆ ಗಾಳಿ ರಭಸದಿಂದಾಗಿ ಬೋಟ್ ದಡಕ್ಕೆ ಬಂದು ಸೇರಿದ್ದು ಬೋಟ್ ಮರಳಿನಲ್ಲಿ ಸಿಲುಕಿಕೊಂಡಿತ್ತು. ಅಲ್ಲದೆ ಇದೇ ರೀತಿ ಮತ್ತೆರಡು ಬೋಟುಗಳು ಸಮುದ್ರ ತೀರಕ್ಕೆ ಬಂದು ಅಪ್ಪಳಿಸಿವೆ. ವಿಷಯ ತಿಳಿದ ಕಾರವಾರದ ಸ್ಥಳೀಯ ಮೀನುಗಾರರು ಎರಡು ಬೋಟನ್ನು ತೆರವುಗೊಳಿಸಿ ಮತ್ತೆ ಲಂಗರು ಹಾಕಿದ್ದಾರೆ.
ಆದರೆ ಒಂದು ಬೋಟ್ ಮಾತ್ರ ಸಿಲುಕಿಕೊಂಡ ಕಾರಣ ದಿನವಿಡೀ ಕಡಲತೀರದ ಬಳಿಯೇ ಕಾಲ ಕಳೆಯುವಂತಾಗಿತ್ತು. ಆದರೆ ಗುರುವಾರ ಮಧ್ಯಾಹ್ನದ ವೇಳೆಗೆ ಬಂದರು ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿರುವ ಮೀನುಗಾರರು ಟಗ್ ಸಹಾಯ ಕೇಳಿದ್ದು, ಇಂದು ದಡದಿಂದ ಎಳೆಯುವ ಸಾಧ್ಯತೆ ಇದೆ.
ಬೈತಖೋಲ್ ಬಂದರು ಆಶ್ರಯ ತಾಣ: ಬೈತಖೋಲ ಸರ್ವ ಋತು ಬಂದರಾದ ಕಾರಣ ಎಲ್ಲಾ ಸಮಯದಲ್ಲಿಯೂ ಮೀನುಗಾರಿಕೆ ಬೋಟ್ಗಳ ತಂಗುದಾಣವಾಗಿದೆ. ಸೈಕ್ಲೋನ್ ಹಾಗೂ ಭೀಕರ ಗಾಳಿ ಬೀಸುವ ವೇಳೆ ಕೇರಳ, ತಮಿಳುನಾಡು ಸೇರಿದಂತೆ ಗೋವಾ, ಮಂಗಳೂರು ಹಾಗೂ ಉಡುಪಿಯ ಬೋಟ್ಗಳಿಗೆ ಬೈತಖೋಲ್ ಬಂದರು ಆಶ್ರಯ ತಾಣವಾಗಿದೆ.
ಇದನ್ನೂ ಓದಿ: ಕಲಬುರಗಿ: ಪ್ರವಾಸಕ್ಕೆ ಬಂದು ನೀರಿನಲ್ಲಿ ಮುಳುಗಿ ಬಾಲಕ ಸಾವು