ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ. "ಚುನಾವಣೆಗೆ ಟಿಕೆಟ್ ಸಿಗುವ ಪೂರ್ವದಿಂದಲೇ ಬೆದರಿಕೆ ಇದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇಂಥ ಘಟನೆ ನಡೆದಿತ್ತು. ಆಗ ಗನ್ ಲೈಸನ್ಸ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆ. ತುಂಬಾ ವಿಳಂಬ ಮಾಡಿ ಲೈಸನ್ಸ್ ಮಂಜೂರು ಮಾಡಿದ್ದರು" ಎಂದು ದೂರಿದರು.
"ನನ್ನ ಕಾರುಗಳನ್ನು ಹಿಂಬಾಲಿಸಿ ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯದ ನೋಂದಣಿಯ ಕಾರು, ಟ್ರಕ್‌ಗಳು ರಾತ್ರಿ ವೇಳೆ ಬರುತ್ತಿವೆ. ನಂಬರ್ ಪ್ಲೇಟ್ ಇಲ್ಲದ, ಹೆಲ್ಮೆಟ್ ಹಾಕಿಕೊಂಡು ಬೈಕ್‌ಗಳಲ್ಲಿ ನನ್ನ ಕಾರುಗಳನ್ನು ಹಿಂಬಾಲಿಸುವ ಮೂಲಕ ನನಗೆ ಬೆದರಿಕೆ ಒಡ್ಡುವ ಘಟನೆಗಳು ನಡೆದಿವೆ. ಮಧ್ಯರಾತ್ರಿ ನನ್ನ ಮನೆಯ ಓಣಿಗಳ ವಿದ್ಯುತ್ ಸಂಪರ್ಕ ತೆಗೆದು, ಬೈಕ್‌ಗಳಲ್ಲಿ ಮನೆಯ ಸುತ್ತಮುತ್ತ ಅಪರಿಚಿತರು ತಿರುಗಾಡಿದ ನಿದರ್ಶನಗಳೂ ಇವೆ" ಎಂದು ಹೇಳಿದ್ದಾರೆ.
"ನನ್ನ ಮಗ, ಅಕ್ಕನ ಮಕ್ಕಳನ್ನು ಕಿಡ್ನಾಪ್ ಮಾಡಲು ಕೆಲವರು ಯತ್ನಿಸಿದ್ದರು. ನಮಗೆ ಸಹಕಾರ ನೀಡಿ, ಇಲ್ಲದಿದ್ದರೆ ಸಾಯಿಸುತ್ತೇವೆ ಎಂದು ನನಗೆ ಮೆಸೇಜ್ ಕೂಡ ಕಳುಹಿಸಿದ್ದಿದೆ. ರಾಜಕಾರಣದಲ್ಲಿ ಯಾರು ಶತ್ರು, ಯಾರು ಮಿತ್ರರೆಂದು ಊಹಿಸುವುದು ಅಸಾಧ್ಯ. ಕೆಲವು ಹತಾಶರಾದ ರಾಜಕಾರಣಿಗಳೂ ಇದರ ಹಿಂದಿರಬಹುದು. ಇವೆಲ್ಲ ಬಹಳ ಸಮಯದಿಂದ ನಡೆಯುತ್ತಿದ್ದರೂ ನಾನು ಇಷ್ಟು ದಿನ ಸುಮ್ಮನಿದ್ದೆ. ಶಾಸಕಳಾದ ನನಗೆ ಇಷ್ಟು ಬೆದರಿಕೆ ಇದೆ ಎಂದು ಗೊತ್ತಾದರೆ ಕ್ಷೇತ್ರದ ಜನತೆಗೂ ಹೆದರಿಕೆ ಉಂಟಾಗುತ್ತದೆ. ನಾನು ಇಂಥ ಸಂದರ್ಭದಲ್ಲಿ ಧೈರ್ಯಗೆಡದೆ ಪರಿಸ್ಥಿತಿ ಎದುರಿಸಿದ್ದೇನೆ" ಎಂದು ವಿವರಿಸಿದರು.
"ಈ ಹಿಂದೆ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರಿದ್ದಾಗ ನನ್ನ ಮನೆ ಕಡೆ ಪೊಲೀಸರನ್ನು ಗಸ್ತು ಹಾಕಿದ್ದು ಸದ್ಯ ಇಂಥವೆಲ್ಲ ಕಡಿಮೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು, ಗ್ರಹ ಸಚಿವರಿಗೂ ದೂರು ನೀಡಿದ್ದೇನೆ. ಕಾರವಾರ ನನ್ನ ಅವಧಿಯಲ್ಲಿ ಬಹಳ ಶಾಂತವಾಗಿತ್ತು. ಆದರೆ ಮತ್ತೆ ಇಲ್ಲಿನ ಶಾಂತಿ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಇಂಥ ಬೆದರಿಕೆಗಳಿಗೆ ಹೆದರುವುದೂ ಇಲ್ಲ" ಎಂದರು.
ರೂಪಾಲಿ ನಾಯ್ಕ ಬಗ್ಗೆ..: ರೂಪಾಲಿ ನಾಯ್ಕ ಅವರು ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆದ್ದು ಬಿಜೆಪಿಯಿಂದ ಶಾಸಕಿಯಾದವರು. ಸದನದಲ್ಲಿ ಹಲವು ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕರ ವಿರುದ್ಧ ಧ್ವನಿ ಎತ್ತಿದ್ದಾರೆ. ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆರೋಪ-ಪ್ರತ್ಯಾರೋಪಗಳು ಸಾಮಾನ್ಯವಾಗುತ್ತಿವೆ. ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಈ ನಡುವೆ ಕಾರವಾರದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ತಮಗೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ. ಶಾಸಕಿಯಾಗುವ ಪೂರ್ವದಿಂದಲೂ ನನಗೆ ಜೀವ ಬೆದರಿಕೆ ಇತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್ ವಿರುದ್ಧ ಶಿಸ್ತು ಕ್ರಮ.. ಹೈಕಮಾಂಡ್ನಿಂದ ಕಾದು ನೋಡುವ ತಂತ್ರ