ಭಟ್ಕಳ: ನಗರದಲ್ಲಿ ಜೂನ್ 23 ರಂದು ಬೆಂಗಳೂರಿನಿಂದ ಬಂದ ವರನಿಂದ (ಯುವಕ) ಕೊರೊನಾ ಪ್ರಕರಣ ಏರಿಕೆಯಾಗಲು ಕಾರಣವಾಗಿದ್ದು, ಅವರನ್ನು ಸಂಪರ್ಕಿಸಿದ ಎಲ್ಲರಲ್ಲಿಯೂ ಸೋಂಕು ಕಂಡು ಬರುತ್ತಲಿದ್ದು ಸದ್ಯ ಮದುವೆಗೆ ತೆರಳಿದವರೇ ಸ್ವಯಂಪ್ರೇರಿತರಾಗಿ ಕ್ವಾರಂಟೈನ್ಗೆ ಒಳಪಡಬೇಕು. ಹಾಗೂ ಈಗಾಗಲೇ ಮೃತ ಯುವಕನ ಸಂಬಂಧಿಕರು ಹಾಗೂ ಮದುವೆಗೆ ಆಗಮಿಸಿದವರ ಮಾಹಿತಿ ಕಲೆ ಹಾಕಲಾಗುತ್ತಿದ್ದು ಅವರೆಲ್ಲರ ಗಂಟಲು ದ್ರವ ಪರೀಕ್ಷೆ ಮಾಡಿಸಿ ಕಟ್ಟುನಿಟ್ಟಿನ ಹೋಮ್ ಕ್ವಾರಂಟೈನ್ಗೆ ಒಳಪಡಬೇಕೆಂದು ಸಹಾಯಕ ಆಯುಕ್ತ ಭರತ್.ಎಸ್ ಹೇಳಿದರು.
ನಗರದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಕೋವಿಡ್-19 ಪ್ರಕರಣದ ಹೆಚ್ಚಳ ಹಾಗೂ ತಾಲೂಕು ಆಡಳಿತದಿಂದ ತೆಗೆದುಕೊಳ್ಳಲಾದ ಕ್ರಮದ ಬಗ್ಗೆ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಸದ್ಯ ಸೋಂಕಿನಿಂದ ಮೃತ ಪಟ್ಟ ಯುವಕ ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು ಜೂನ್ 23 ರಂದು ಭಟ್ಕಳಕ್ಕೆ ಬಂದಿದ್ದಾನೆ. ಜೂನ್ 25 ಕ್ಕೆ ಮದುವೆಯಾಗಿ, ಬಳಿಕ ಮಂಗಳೂರಿಗೆ ತೆರಳಿದ್ದು ಅಲ್ಲಿ ಅನಾರೋಗ್ಯಕ್ಕೊಳಪಟ್ಟು ಬುಧವಾರ ಮೃತ ಪಟ್ಟಿದ್ದಾನೆ. ನಂತರ ಆಸ್ಪತ್ರೆಯಲ್ಲಿ ಮೃತನ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ ಎಂದರು.
ಈ ಎಲ್ಲಾ ಪ್ರಕರಣಕ್ಕೆ ಮೂಲ ಯುವಕ, ಈತ ಬೆಂಗಳೂರಿನಿಂದ ಬಂದಿದ್ದು ಅಲ್ಲಿ ಹೆಚ್ಚು ಪ್ರಕರಣ ಇರುವ ಕಾರಣದಿಂದ ಭಟ್ಕಳದಲ್ಲಿ ಎರಡು ದಿನದಿಂದ ಮೃತ ಯುವಕನ ಸಂಪರ್ಕಕ್ಕೆ ಬಂದವರಿಗೆ ಪ್ರಕರಣ ದೃಢಪಡುತ್ತಿದೆ. ಸದ್ಯ ತಾಲೂಕಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು. ಇನ್ನು ಈಗಾಗಲೇ ನೋಡಲ್ ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಮೂಲಕ ಮದುವೆಯಲ್ಲಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು ಅವರನ್ನು ಸಂಪರ್ಕಿಸಲಾಗುತ್ತಿದೆ ಎಂದರು.
ಇನ್ನು ರೋಗ ಲಕ್ಷಣ ಇಲ್ಲದವರಿಗೆ ತಾಲೂಕು ಮಟ್ಟದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ನೀಡಲಿದ್ದಾರೆ. ಮತ್ತು ಜ್ವರ ತಲೆನೋವುಗಳಿದ್ದಲ್ಲಿ ಅವರಿಗೆ ತಪಾಸಣೆ ಮಾಡಿ ಔಷಧೋಪಾಚಾರ ನೀಡಲಿದ್ದು ಅವರಲ್ಲಿನ ರೋಗ ಲಕ್ಷಣದ ಮಿತಿಯನ್ನಾಧರಿಸಿ ವೈದ್ಯರುಗಳು ಅವರನ್ನು ಕ್ವಾರಂಟೈನ್ ಅಥವಾ ಕ್ವಾರಂಟೈನ್ ಬೇಡ ಎಂಬುದು ನಿರ್ಧರಿಸಲಿದ್ದಾರೆ ಎಂದರು.
ಈಗಾಗಲೇ ಜಿಲ್ಲಾಡಳಿತದ ಸೂಚನೆಯಂತೆ ತಾಲೂಕು ಮಟ್ಟದಲ್ಲಿನ ಕೋವಿಡ್ ಸೋಂಕಿತರಿಗೆ ತಾಲೂಕಿನಲ್ಲಿಯೇ ಹಾಸ್ಪಿಟಲ್ ತಯಾರಿಸಿ ಅವರೆಲ್ಲರಲ್ಲು ಸದ್ಯ ಸೋನಾರಕೇರಿ ಸರ್ಕಾರಿ ಹಾಸ್ಟೆಲ್‍ನಲ್ಲಿ 35-40 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು ಕ್ವಾರಂಟೈನ್ಗೆ ಇರಿಸಿ ಎಲ್ಲಾ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿಲಾಗಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರು ಸಹ ಸೋಂಕಿತರ ಸ್ಥಳಾಂತರಕ್ಕೆ ವಿರೋಧಿಸಿದ್ದು ಮುನ್ನೆಚ್ಚರಿಕೆ ಕ್ರಮದ ಸೂಚನೆ ನೀಡಿದ್ದು ಅದರಂತೆ ಹಾಸ್ಟೆಲ್ ಹೊರಗಡೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿನ 14 ಬೆಡ್‍ಗಳನ್ನು ಆಯ್ಕೆ ಮಾಡಲಾಗಿದ್ದು ಹಾಸ್ಟೆಲ್‍ನಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹಾಕಲಿದ್ದೇವೆ. ಸದ್ಯ 100 ಬೆಡ್‍ಗಳನ್ನು ಇರಿಸಲಾಗುವಷ್ಟು ದೊಡ್ಡ ಕಟ್ಟಡದ ಆಯ್ಕೆಯ ಚರ್ಚೆ ನಡೆಸಲಾಗಿದ್ದು, ಕಟ್ಟಡದ ಹುಡುಕಾಟವಿದ್ದು ಒಂದು ವೇಳೆ ಸಿಕ್ಕಿದ್ದಲ್ಲಿ ಅಲ್ಲಿಯೇ ಎಲ್ಲಾ ಸೋಂಕಿತರನ್ನು ಸ್ಥಳಾಂತರಿಸಿ ಮುಂದೆ ಪ್ರಕರಣ ಬಂದರೆ ವೈದ್ಯಕೀಯ ವ್ಯವಸ್ಥೆಗೆ ಅನೂಕೂಲವಾಗಲಿದೆ ಎಂದರು.