ಭಟ್ಕಳ : ತಾಲೂಕಿನ ಜಾಲಿ, ತಲಗೇರಿ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಟ್ಟಿರುವ ದನ, ಕರುಗಳನ್ನು ರಾತ್ರೋ ರಾತ್ರಿ ಹಗ್ಗ ಸಮೇತ ಕದ್ದು ಜಾಲಿ ವ್ಯಾಪ್ತಿಯ ಮೈದಾನದಲ್ಲಿ ದನ ಕಡಿದು ಮಾಂಸ ತೆಗೆದು ಸಾಗಿಸುವ ತಂಡವೊಂದು ಸಜ್ಜಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಲಾಕ್ಡೌನ್ ಆರಂಭದ ದಿನದಿಂದ ದನಗಳ್ಳತನ ನಡೆಯುತ್ತಿರುವ ಬಗ್ಗೆ ದನ ಕಳೆದುಕೊಂಡ ಜನರು ಮಾಹಿತಿ ನೀಡಿದ್ದು, ಒಂದೇ ಮನೆಯ ಎರಡು ದನ, ಇನ್ನೊಂದು ಮನೆಯ ಕರು ಸಮೇತ ಈಗಾಗಲೇ 10-12 ಮನೆಗಳ ದನಕರುಗಳು ವಾಪಸ್ ಬಂದಿಲ್ಲ, ದನ ಮನೆಗೆ ಬಾರದೇ ಇರುವ ಹಿನ್ನೆಲೆ ದನದ ಮಾಲೀಕರೊಬ್ಬರು ನಿತ್ಯ ದನ ಮೇಯಲು ಹೋಗುವ ಸ್ಥಳದಲ್ಲೆಲ್ಲ ಹುಡುಕಾಟ ನಡೆಸಿದಾಗ, ದನಗಳನ್ನು ಕಡಿದಿರುವ ಕುರುಹುಗಳು ಕಂಡು ಬಂದಿದ್ದು, ದನದ ಹೊಟ್ಟೆಯೊಳಗಿನ ತ್ಯಾಜ್ಯ ಹಾಗೂ ಕೆಲವು ಕಡೆ ದನದ ರುಂಡಗಳೆಲ್ಲ ಕಂಡು ಬಂದಿವೆ.
ದನಗಳ್ಳರ ತಂಡ :
ಲಾಕ್ಡೌನ್ ಆದ ದಿನದಿಂದ ಇತ್ತೀಚಿನ ದಿನದಲ್ಲಿ ಜಾಲಿ ಸುತ್ತಮುತ್ತಲಿನ ಪ್ರದೇಶದಲ್ಲಿ 3 - 4 ಜನರುಳ್ಳ ದನಗಳ್ಳತನ ಮಾಡಿ ಅದನ್ನು ಕಡಿದು ಸಾಗಣೆ ಮಾಡುವ ಅಕ್ರಮ ಕೆಲಸದ ತಂಡವೊಂದು ಈ ಕುಕೃತ್ಯ ನಡೆಸುತ್ತಿದೆ. ಈ ಬಗ್ಗೆ ತಕ್ಷಣವೇ ಪೊಲೀಸ್ ಇಲಾಖೆ ಬಂಧಿಸಿ ಶಿಕ್ಷಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ದನ ಕಳೆದುಕೊಂಡ ಜನರು.