ಶಿರಸಿ: ಒಂಟಿ ಮಹಿಳೆಯರ ಮೇಲೆ ದಾಳಿ ಮಾಡಿ ಬಂಗಾರದ ಸರ, ಉಂಗುರಗಳನ್ನು ಎಗರಿಸಿಕೊಂಡು ಹೋಗುತ್ತಿದ್ದ ಕಳ್ಳನೋರ್ವನನ್ನು ಶಿರಸಿ ಪೊಲೀಸರು ಬಂಧಿಸಿ, ಸುಮಾರು 1 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ಇಂದಿರಾ ನಗರದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಾಸೂರಿನ ಗೋವಿಂದ ಬೇಟೆ ಗೌಡ (40) ಬಂಧಿತ ಆರೋಪಿಯಾಗಿದ್ದಾನೆ. ಈತ ಶಿರಸಿ, ಕುಮಟಾ ಸೇರಿದಂತೆ ವಿವಿಧ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಂಟಿ ಮಹಿಳೆಯರ ಮೇಲೆ ದಾಳಿ ನಡೆಸಿ, ಅವರ ಕುತ್ತಿಗೆ ಮತ್ತು ಕೈಯಲ್ಲಿರುತ್ತಿದ್ದ ಬಂಗಾರದ ಸರ ಹಾಗೂ ಉಂಗುರಗಳನ್ನು ಎಳೆದುಕೊಂಡು ಎಸ್ಕೇಪ್ ಆಗುತ್ತಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯಿಂದ 25 ಸಾವಿರ ರೂ. ಬೆಲೆ ಬಾಳುವ ಬಜಾಜ್ ಮೋಟಾರ್ ದ್ವಿಚಕ್ರ ವಾಹನ, 7 ಸಾವಿರ ರೂ. ಮೌಲ್ಯದ ಬಂಗಾರದ ಕಿವಿಯೋಲೆ ಹಾಗೂ ಉಂಗುರ, 42 ಸಾವಿರ ರೂ. ಮೌಲ್ಯದ ಬಂಗಾರದ ಸರ, 27 ಸಾವಿರ ರೂ. ಮೌಲ್ಯದ ಕರಿಮಣಿ ಹಾಗೂ 25 ಸಾವಿರ ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ, ಪಿಎಸ್ಐ ನಾಗಪ್ಪ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಸದ್ಯ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.