ಶಿರಸಿ (ಉತ್ತರಕನ್ನಡ): ಕೊರೊನಾ ಮಹಾಮಾರಿಯಿಂದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಶಿರಸಿಯಲ್ಲಿ ತಾಲೂಕಾಡಳಿತ ಹಾಗು ಖಾಸಗಿ ಆಸ್ಪತ್ರೆಗಳ ನಡುವಿನ ಸಂಘರ್ಷ ಹುಟ್ಟಿಕೊಂಡಿದ್ದು, ಇದು ರೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರದ ನಿಯಮದಂತೆ ಶಿರಸಿಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಶೇಕಡಾ 50ರಷ್ಟು ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕು ಎಂದು ತಹಶೀಲ್ದಾರ್ ಎಮ್.ಆರ್.ಕುಲಕರ್ಣಿ ಸೂಚನೆ ನೀಡಿದ್ದಾರೆ. ಆದರೆ, ಸರ್ಕಾರದ ಬೆಂಬಲ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲವೆಂದು ಶಿರಸಿಯಲ್ಲಿರುವ ಎರಡು ಖಾಸಗಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಇನ್ಮುಂದೆ ಸೋಂಕಿತರನ್ನು ದಾಖಲು ಮಾಡಿಕೊಳ್ಳುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದು ಜನರನ್ನು ಗೊಂದಲಕ್ಕೆ ಸಿಲುಕಿಸಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯ ದಿನೇಶ್ ಹೆಗಡೆ, ಸರ್ಕಾರದ ಬೆಂಬಲ ನಮಗೆ ಅತಿ ಅಗತ್ಯವಾಗಿದೆ. ಕಳೆದ ಒಂದು ವರ್ಷದಿಂದ ಜೀವದ ಹಂಗು ತೊರೆದು ನಾವು ಜನರಿಗೆ ಸೇವೆ ನೀಡುತ್ತಿದ್ದೇವೆ. ಅದಕ್ಕಾಗಿ ಎರಡು ಆಸ್ಪತ್ರೆಗಳನ್ನು ಸಂಪೂರ್ಣ ಮೀಸಲಿಟ್ಟಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ನಿಯಮಗಳಿಂದ ತೊಂದರೆ ಆಗುತ್ತಿದ್ದು, ಕಾಗದ ಪತ್ರ ವ್ಯವಹಾರ, ಆಕ್ಸಿಜನ್, ಇಂಜೆಕ್ಷನ್ ಮಾಹಿತಿ ಹೀಗೆ ವಿವಿಧ ಕಾರಣಗಳಿಂದ ನಮಗೆ ಒತ್ತಡ ಸೃಷ್ಟಿಯಾಗಿದೆ. ಹಾಗಾಗಿ ಇನ್ಮುಂದೆ ಮಹಾಲಕ್ಷ್ಮೀ ಆಸ್ಪತ್ರೆ ಹಾಗೂ ಸಿಟಿ ಸ್ಕಾನ್ ಸೆಂಟರ್ನಲ್ಲಿ ಯಾವುದೇ ಹೊಸ ಸೋಂಕಿತರನ್ನು ದಾಖಲು ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಎಮ್.ಆರ್. ಕುಲಕರ್ಣಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲು ಸೂಚಿಸಲಾಗಿದೆ. ಈ ಬಗ್ಗೆ ಚಾರಿಟೇಬಲ್ ಆಸ್ಪತ್ರೆಗಳೂ ಸೇರಿ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.
ಓದಿ: 'ನೀವೇ 100 ಕೋಟಿ ರೂ. ವೈಯಕ್ತಿಕವಾಗಿ ಘೋಷಿಸಿ ಯೇಸು ಪುತ್ರ ಡಿಕೆಶಿ'- ರೇಣುಕಾಚಾರ್ಯ ವ್ಯಂಗ್ಯ