ಶಿರಸಿ: ರಾಜ್ಯ ಸರ್ಕಾರದಿಂದ ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ 771 ಕೋಟಿ ರೂ. ಬರಬೇಕಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷ ವಿ.ಎಸ್.ಪಾಟೀಲ್ ಹೇಳಿದ್ರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಶನಿವಾರ ಅಥಣಿಯಲ್ಲಿ ಸಾರಿಗೆ ಸಚಿವರು ನೂತನ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ನಿಗಮಕ್ಕೆ ಬಾಕಿಯಿರುವ ಹಣವನ್ನು ಬಿಡುಗಡೆ ಮಾಡುವಂತೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ನೌಕರರಿಗೆ 422 ಕೋಟಿ ರೂ. ಕೊಡಬೇಕಾಗಿದ್ದು, ದೀಪಾವಳಿಗೆ ನೀಡಬೇಕು ಎಂದು ನೌಕರರು ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ. ಸಂಸ್ಥೆ ಲಾಭಕ್ಕಾಗಿ ಇರುವುದಲ್ಲ, ಜನಸೇವೆಗಾಗಿ ಇದೆ. ಗ್ರಾಮಾಂತರ ಪ್ರದೇಶಗಳ ಸಾರಿಗೆ ಸೇವೆಯಿಂದ ನಿಗಮ ನಷ್ಟದಲ್ಲಿದ್ದರೂ ಜನಸೇವೆಯನ್ನು ಮುಂದುವರೆಸುತ್ತೇವೆ ಎಂದರು.