ಕಾರವಾರ: ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮನೆ ಸುತ್ತ ನೀರು ತುಂಬಿದ ಕಾರಣ ಕುಟುಂಬವೊಂದು ರಾತ್ರಿ ನಿದ್ದೆಯಿಲ್ಲದೆ ಭಯದಲ್ಲಿಯೇ ಕಳೆದಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ನಡೆಯುತ್ತಿದ್ದು, ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗುರುವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಅರಗಾ ನೌಕಾನೆಲೆ ಮುಂಭಾಗದ ಮೇಲಿನ ಕೇರಿಯಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ಇಲ್ಲಿನ ಸಮ್ಮಿದ್ ಬಾಂದೇಕರ್ ಎಂಬುವವರ ಮನೆಯೊಳಗೆ ಮೆಟ್ಟಿಲವರೆಗೂ ನೀರು ಬಂದಿದ್ದು, ಇಬ್ಬರು ಪುಟ್ಟ ಮಕ್ಕಳು ಇರುವ ಕುಟುಂಬದವರು ಆತಂಕದಲ್ಲಿಯೇ ಬೆಳಗು ಮಾಡಿದ್ದಾರೆ.
ರಾತ್ರಿ ವಿಪರೀತವಾಗಿ ಮಳೆಯಾಗಿದ್ದು, ಗದ್ದೆ ಮಧ್ಯೆ ಮನೆ ಇರುವ ಕಾರಣ ಎಲ್ಲರೂ ಆತಂಕಗೊಂಡಿದ್ದೆವು. ಅಲ್ಲದೆ ಮನೆಯಲ್ಲಿ ಮಕ್ಕಳಿರುವ ಕಾರಣ ಎಲ್ಲಿ ಅವಘಡ ಸಂಭವಿಸುವುದೋ ಎನ್ನುವ ಆತಂಕ ಇತ್ತು. ನೀರು ಹರಿದು ಹೋಗಲು ಕಾಲುವೆ ಇಲ್ಲದ ಕಾರಣ ಈ ರೀತಿ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಅರಗಾ ಮೇಲಿನಕೇರಿ ನಿವಾಸಿ ಸುರೇಖಾ ಸದಾನಂದ ಬಾಂದೇಕರ್.
ಐಆರ್ಬಿ ಕಂಪನಿಯವರ ಕಾಮಗಾರಿ ಹಾಗೂ ಇಲ್ಲಿನ ಕೆಲ ಮನೆಯವರು ಅನಾದಿಕಾಲದಿಂದಲೂ ನೀರು ಹರಿದುಹೋಗುವ ಕಾಲುವೆ ಬಂದ್ ಮಾಡಿದ ಕಾರಣ ಪ್ರತಿ ಮಳೆಗೆ ನೀರು ತುಂಬುತ್ತಿದೆ. ಮಳೆ ಬಂದಾಗ ಇಲ್ಲಿನ ನಾಲ್ಕಾರು ಮನೆಗಳಿಗೆ ಸಂಪರ್ಕವೇ ಕಡಿತಗೊಳ್ಳುತ್ತಿದೆ. ಅಲ್ಲದೆ ಮನೆ ಸುತ್ತ ನೀರು ತುಂಬಿಕೊಳ್ಳುವುದರಿಂದ ಗೋಡೆ ಕುಸಿಯುವ ಆತಂಕ ಇದೆ. ಮನೆಯಲ್ಲಿ ವೃದ್ಧರು ಪುಟ್ಟ ಮಕ್ಕಳಿದ್ದು, ತುಂಬಾ ಅಪಾಯಕಾರಿ ಸ್ಥಳವಾಗಿ ಮಾರ್ಪಟ್ಟಿದೆ. ಅಲ್ಲದೆ ಮಕ್ಕಳ ಅನಾರೋಗ್ಯಕ್ಕೂ ಕಾರಣವಾಗುತ್ತಿದ್ದು, ಕೂಡಲೇ ಸಂಬಂಧಪಟ್ಟವರು ನೀರು ಸರಾಗವಾಗಿ ಹರಿದು ಹೊಗುವಂತೆ ಕಾಲುವೆ ಮಾಡಿ ಕೊಡಬೇಕು ಎನ್ನುತ್ತಾರೆ ಸಮ್ಮಿದ್ ಬಾಂದೇಕರ್.
ಇನ್ನು ಭಾರಿ ಮಳೆಯಿಂದಾಗಿ ನೌಕಾನೆಲೆ ಮುಂಭಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೂಡ ನೀರು ತುಂಬಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಭಾಗದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮತ್ತು ಮಳೆಗಾಲ ಪೂರ್ವ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಈ ಭಾಗದ ಖಾಲಿ ಜಾಗದಲ್ಲಿ ನೀರು ತುಂಬಿ ಹೆದ್ದಾರಿ ಮೇಲೆ ಹರಿಯುವಂತಾಗಿದೆ. ಸ್ಥಳೀಯ ಆಡಳಿತ ಅವಘಡ ಸಂಭವಿಸುವ ಮೊದಲು ಈ ಭಾಗದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಒತ್ತಾಯವಾಗಿದೆ.