ಕಾರವಾರ : ಉತ್ತರಕನ್ನಡದಲ್ಲಿ ಒಂದು ಹಂತದಲ್ಲಿ ಹತೋಟಿಗೆ ಬಂದಿದ್ದ ಕೊರೊನಾ ವೈರಸ್ ಇದೀಗ 'ಮಹಾ'ನಂಜಿನಿಂದಾಗಿ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಈ ನಡುವೇ ಜಿಲ್ಲೆಗೆ ವಲಸೆ ಬರುವವರ ಸಂಖ್ಯೆ ಕೂಡ ಹೆಚ್ಚುತಲೇ ಸಾಗಿದ್ದು, ಅದೃಷ್ಟವಶಾತ್ ಕ್ವಾರಂಟೈನ್ ಮಾಡಿ ಸೋಂಕು ಪತ್ತೆಹಚ್ಚಲಾಗುತ್ತಿದೆ. ಆದರೆ, ಈ ತಿಂಗಳ ಅಂತ್ಯದಲ್ಲಿ ರಾಜ್ಯದ ಗಡಿ ತೆರೆದರೆ ಮುಂದೇನು ಎಂಬ ಆತಂಕ ಇದೀಗ ಜಿಲ್ಲೆಯ ಜನರನ್ನು ಕಾಡತೊಡಗಿದೆ.
ಹೌದು ದುಬೈನಿಂದ ಆಗಮಿಸಿದ್ದವರಿಂದ ಉತ್ತರ ಕನ್ನಡ ಜಿಲ್ಲೆಗೆ ತಗುಲಿದ್ದ ಸೋಂಕು ಇದೀಗ ವಲಸಿಗರಿಂದಾಗಿ ದಿನೇ ದಿನೆ ಹೆಚ್ಚಾಗತೊಡಗಿದೆ. ಈಗಾಗಲೇ ಸಕ್ರಿಯ ಸೋಂಕಿತರ ಸಂಖ್ಯೆಯೇ 52ಕ್ಕೆ ಏರಿಕೆಯಾಗಿದೆ. ಅದರಲ್ಲಿ ಮಹಾರಾಷ್ಟ್ರದಿಂದ ಬಂದವರೇ 20 ಮಂದಿ ಇದ್ದು ಗುಜರಾತ್ ಹಾಗೂ ತಮಿಳುನಾಡಿನಿಂದ ಓರ್ವರಿಗೆ ಸೋಂಕು ದೃಢಪಟ್ಟಿದೆ.
ಇನ್ನು ಈಗಾಗಲೇ ಮಹಾ ವಲಸೆ ಬಂದವರನ್ನು ಜಿಲ್ಲೆಯ ವಿವಿಧ ಹೋಟೆಲ್, ಸಾಂಸ್ಥಿಕ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಿದ್ದು, ಸ್ಥಳೀಯರ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ. ಮೇ 31 ರ ವರೆಗೆ ಮಾತ್ರ ಅಂತರ ರಾಜ್ಯ ಗಡಿ ನಿರ್ಬಂಧ ಹೇರಲಾಗಿದ್ದು, ಮುಂದೆ ತೆರವುಗೊಳಿಸಿದರೇ ನಿಯಂತ್ರಣ ಕಷ್ಟಸಾಧ್ಯ. ಆದ್ದರಿಂದ ಸರ್ಕಾರ ಮುಂದಿನ 2 ತಿಂಗಳವರೆಗೂ ಅಂತಾರಾಜ್ಯ ಗಡಿಗಳ ಬಂದ್ ಮುಂದುವರೆಸಬೇಕು ಎಂದು ಜನ ಆಗ್ರಹಿಸಿದ್ದಾರೆ.