ಕಾರವಾರ: ರಾಜಕೀಯ ಸ್ವಾರ್ಥಕ್ಕಾಗಿ ಕೆಲವರು ಲಂಬಾಣಿ, ಭೋವಿ, ಕೊರಟ ಮತ್ತು ಕೊರವ ಸಮುದಾಯದವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಬಿಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಬಗೆಗಿನ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಜೂನ್ 10 ರಂದು ಪತ್ರ ಬರೆಯುವ ಮುಖೇನ ಜನತಾ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿಯ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಉದಯ ಬಶೆಟ್ಟಿ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕೊರಮ, ಕೊರಚ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲು ಪರಿಶಿಷ್ಟ ಜಾತಿಯಲ್ಲಿ ಬಲಾಢ್ಯ ಹಾಗೂ ಪ್ರಭಾವಿ ಸಮುದಾಯಗಳೆನಿಸಿದ ಎಡಗೈ, ಬಲಗೈನ ಕೆಲವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿ ದೂರುದಾರರಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿತು. ಆಯೋಗದ ಮನವಿ ಸ್ವೀಕರಿಸಿ ಕರ್ನಾಟಕ ಸರ್ಕಾರಕ್ಕೆ ಈ ಜಾತಿಗಳನ್ನು ಕೈಬಿಡುವ ಕುರಿತು ತನ್ನ ಅಭಿಪ್ರಾಯ ತಿಳಿಸಲು ಕೋರಿ ಪತ್ರ ಬರೆದಿದೆ ಎಂದು ತಿಳಿಸಿದರು.
ಪರಿಶಿಷ್ಟರಲ್ಲಿ ಅತ್ಯಂತ ಹಿಂದುಳಿದ ಜನಾಂಗದವರಾಗಿರುವ ಈ ಜಾತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ತಬ್ಬಲಿ ಜನಾಂಗದ ಮೇಲೆ ಕಾಳಜಿ, ಕನಿಕರ ತೋರಿಸಬೇಕು ಎಂದು ಬಶೆಟ್ಟಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಲಂಬಾಣಿ ಸಂಘದ ಜಿಲ್ಲಾಧ್ಯಕ್ಷ ಸುರೇಶ ನಾಯಕ, ಭೋವಿ ಸಮಾಜದ ಜಿಲ್ಲಾಧ್ಯಕ್ಷ ಭರಮಪ್ಪ ಕಟ್ಟಿಮನಿ, ಬಿಜೆಪಿ ಎಸ್.ಸಿ. ಮೋರ್ಚಾ ಕಾರವಾರ ತಾಲೂಕಾಧ್ಯಕ್ಷ ಸತೀಶ ವಡ್ಡರ್ ಉಪಸ್ಥಿತರಿದ್ದರು.