ಕಾರವಾರ: ಅಪ್ರಾಪ್ತ ಮಗನಿಗೆ ವಾಹನ ಚಲಾಯಿಸಲು ಕೊಟ್ಟ ತಾಯಿಗೆ ಕಾರವಾರದ ಹಿರಿಯ ಸಿವಿಲ್ ನ್ಯಾಯಾಲಯ ಬರೋಬ್ಬರಿ 25,500 ರೂ. ದಂಡ ವಿಧಿಸಿ ಆದೇಶಿಸಿದೆ. ನಗರದ ನಂದನಗದ್ದಾದ ರೇಷ್ಮಾ ಅಲಿ ಶೇಖ್ ಅವರು ದಂಡಕ್ಕೆ ಒಳಗಾಗಿದ್ದಾರೆ.
ಇವರು ತಮ್ಮ ಮಾಲೀಕತ್ವದಲ್ಲಿ ಇದ್ದ ಸ್ಕೂಟಿಯಲ್ಲಿ ತಮ್ಮ 16 ವರ್ಷದ ಬಾಲಕನಿಗೆ ಚಲಾಯಿಸಲು ಕೊಟ್ಟಿದ್ದರು. ಬಾಲಕನು ಬುಧವಾರ ನಗರದಲ್ಲಿ ಸ್ಕೂಟಿ ಚಲಾಯಿಸುವಾಗ ಸಂಚಾರ ಪೊಲೀಸರು ತಡೆದು ಪ್ರಕರಣ ದಾಖಲಿಸಿದ್ದರು.
ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಟ್ಟರೆ ವಾಹನ ಮಾಲೀಕರಿಗೆ 25 ಸಾವಿರ ರೂ. ವರೆಗೆ ದಂಡ ವಿಧಿಸಲು ಅವಕಾಶ ಇದೆ. ಕಾರವಾರ ನಗರದಲ್ಲಿ ಸಾಕಷ್ಟು ಪಾಲಕರು ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡುತ್ತಾರೆ. ಆದ್ದರಿಂದ, ಸಂಚಾರ ಅವಘಡಗಳು ಆಗುತ್ತಿವೆ. ಹಾಗಾಗಿ, ಅಂಥವರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ ಎಂದು ಸಂಚಾರ ಠಾಣೆ ಪಿಎಸ್‌ಐ ನಾಗಪ್ಪ ಬೋವಿ ತಿಳಿಸಿದರು.
ಅಧಿಕ ಸರಕು ಹೊತ್ತ ಲಾರಿಗೆ ದಂಡ: ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸ್ಟೀಲ್ ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳಿಗೆ ನ್ಯಾಯಾಲಯ ದಂಡ ವಿಧಿಸಿದೆ. ಒಂದು ಲಾರಿಯ ಚಾಲಕನಾದ ದಾವಣಗೆರೆ ಮೂಲದ ಶಿವಕುಮಾರ್ ಪರಮೇಶ್ವರ್ಗೆ 29,100 ರೂ ಹಾಗೂ ಇನ್ನೊಂದು ಲಾರಿಯ ಚಾಲಕ ಉಡುಪಿ ಮೂಲದ ರವಿರಾಜ್‌ನಿಗೆ 24 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸಿದ ತಾಲೂಕಿನ ಬಿಣಗಾ ಮೂಲದ ಜನಾರ್ದನ ಎನ್ನುವವರಿಗೆ 10 ಸಾವಿರ ರೂ. ದಂಡ ವಿಧಿಸಿದೆ. ಈ ಎಲ್ಲ ಪ್ರಕರಣಗಳು ಬುಧವಾರ ದಾಖಲಾಗಿದ್ದವು. ಗುರುವಾರ ನ್ಯಾಯಾಲಯವು ಪ್ರಕರಣ ಇತ್ಯರ್ಥಗೊಳಿಸಿದೆ.
ಓದಿ: ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಅನುಮತಿಯಿಲ್ಲದೇ ಫೋಟೋ, ವಿಡಿಯೋ ತೆಗೆಯುವ ಹಾಗಿಲ್ಲ