ಕಾರವಾರ: ವೈದ್ಯನ ನಿರ್ಲಕ್ಷ್ಯದಿಂದ ಬಾಣಂತಿ ಮಹಿಳೆ ಮೃತಪಟ್ಟಿರುವ ಆರೋಪದಡಿ ತನ್ನ ಹುದ್ದೆ ಕಳೆದು ಕೊಂಡಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಬೋಧಕ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್ ಅವರನ್ನು ಬುಧವಾರ ಸರ್ಕಾರ ಮರು ನೇಮಕ ಮಾಡಿದೆ.
ಸೆಪ್ಟೆಂಬರ್ 3ರಂದು ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದ ಗೀತಾ ಬಾನಾವಳಿ ಎಂಬಾಕೆ ಶಸ್ತ್ರ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಳು. ಡಾ.ಕುಡ್ತರಕರ್ ನಿರ್ಲಕ್ಷದಿಂದಲೇ ಬಾಣಂತಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ವಿಷಯ ಸರ್ಕಾರದ ಗಮನಕ್ಕೂ ಹೋದ ಕಾರಣ ಜಿಲ್ಲಾಡಳಿತಕ್ಕೆ ಘಟನೆ ಸಂಬಂಧ ತನಿಖೆ ನಡೆಸಲು ಸರ್ಕಾರ ಸೂಚಿಸಿದ ಹಿನ್ನೆಲೆ ತನಿಖಾ ತಂಡವನ್ನು ನೇಮಿಸಲಾಗಿತ್ತು. ಸರ್ಕಾರ ಕುಡ್ತರಕರ್ ಅವರನ್ನು ವರ್ಗಾವಣೆ ಮಾಡಿ ಅವರ ಹುದ್ದೆಗೆ ಸ್ಥಾನಿಕ ವೈದ್ಯಕೀಯ ಅಧಿಕಾರಿಯಾಗಿದ್ದ (ಆರ್‌ಎಂಒ) ಡಾ.ವೆಂಕಟೇಶ್ ಅವರನ್ನು ನೇಮಿಸಲಾಗಿತ್ತು. ತನ್ನ ತಪ್ಪಿಲ್ಲದಿದ್ದರೂ ವರ್ಗಾವಣೆ ಮಾಡಲಾಗಿದೆ ಎಂದು ಕುಡ್ತರಕರ್ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ (ಕೆಎಟಿ) ಮೊರೆ ಹೋಗಿದ್ದರು.
ಕೆಎಟಿಯಲ್ಲಿ ಸರ್ಕಾರದ ವರ್ಗಾವಣೆ ಆದೇಶದ ವಿಚಾರಣೆ ನಡೆದಿದೆ. ಇತ್ತೀಚಿಗೆ ತನಿಖಾ ತಂಡ ಬಾಣಂತಿ ಸಾವಿನ ಪ್ರಕರಣದಲ್ಲಿ ಕುಡ್ತರಕರ್ ನಿರ್ದೋಷಿ ಎಂದು ವರದಿ ನೀಡಿದ್ದರ ಬೆನ್ನಲ್ಲೇ ಸರ್ಕಾರ ಮರು ನೇಮಕ ಮಾಡುವಂತೆ ಆದೇಶ ಮಾಡಿದೆ.
ಸರ್ಜನ್ ಮರು ನೇಮಕ ವಿರೋಧಿಸಿ ಬೃಹತ್ ಪ್ರತಿಭಟನೆ
ಸರ್ಜನ್ ಶಿವಾನಂದ ಕುಡ್ತರಕರ್ ಆಸ್ಪತ್ರೆಗೆ ಮರಳಿದ್ದನ್ನು ವಿರೋಧಿಸಿ ಮೃತಪಟ್ಟ ಬಾಣಂತಿ ಮಹಿಳೆ ಕುಟುಂಬಸ್ಥರು ಕಾರವಾರದಲ್ಲಿ ಪ್ರತಿಭಟನೆ ನಡೆಸಿದರು. ಸರ್ವೋದಯ ನಗರದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ್ದ ನೂರಾರು ಜನರು ಕುಡ್ತರಕರ್ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.