ಶಿರಸಿ: ಮನೆಯ ಮುಂಭಾಗದಲ್ಲಿ ಪ್ರಾಣಿಗಳ ಕಲರವ, ಪಕ್ಷಿಗಳ ಚಿಲಿಪಿಲಿ. ಮನೆಯ ಯಜಮಾನನ ಜೊತೆ ಆತ್ಮೀಯವಾಗಿ ಬೆರೆಯುವ ಪ್ರಾಣಿಗಳು, ಸವಾರಿ ಜೊತೆ ಕೃಷಿ ಕೆಲಸಕ್ಕೂ ಸೈ ಎನ್ನುವ ಕುದುರೆಗಳು.. ಇವೆಲ್ಲವನ್ನೂ ನೋಡಿಯೇ ಖುಷಿ ಪಡೀಬೇಕು. ಇದು ಯಾವುದೋ ಪ್ರಾಣಿ ಸಂಗ್ರಹಾಲಯದ ಸ್ಟೋರಿಯಲ್ಲ, ಬದಲಾಗಿ ಪ್ರಾಣಿಪ್ರಿಯ ಸಿದ್ದಾಪುರ ತಾಲೂಕಿನ ಗೋಪಾಲ ಭಟ್ ಮನೆಯ ಆವರಣ!
ಕ್ಯಾದಗಿ ಸಮೀಪದ ಗೋಪಾಲ ಭಟ್ ಅವರ ಮನೆಗೆ ಹೋದಾಗ ಅದೊಂದು ಪ್ರಾಣಿ ಪಕ್ಷಿಗಳ ಆಶ್ರಯಧಾಮವೇನೋ ಎಂಬಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ಪ್ರಾಣಿ ಪಕ್ಷಿಗಳನ್ನು ಇವರ ತಾತನ ಕಾಲದಿಂದಲೂ ಹವ್ಯಾಸವಾಗಿ ಸಾಕಿಕೊಂಡು ಬರಲಾಗುತ್ತಿದೆಯಂತೆ. ಅದನ್ನೇ ಗೋಪಾಲ ಭಟ್ ಇವತ್ತಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇವುಗಳನ್ನು ಸಾಕುವುದು ಮಾತ್ರವಲ್ಲ, ವಿವಿಧ ರೀತಿಯ ತರಭೇತಿಯನ್ನೂ ನೀಡಿ, ಅವುಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ಕೂಡ ತೋರಿಸಿಕೊಡುತ್ತಿದ್ದಾರೆ.
ಇವರಲ್ಲಿ ಯಾವ ಯಾವ ಪ್ರಾಣಿ, ಪಕ್ಷಿಗಳಿವೆ ಗೊತ್ತೇ..?
ಕುದುರೆ,ಮೊಲ,ನಾಯಿ,ಬಾತುಕೋಳಿ ಹಾಗೂ ವಿವಿಧ ರೀತಿಯ ಪಾರಿವಾಳ, ಪಕ್ಷಿಗಳು ಇಲ್ಲಿವೆ. ಇದರಲ್ಲಿ ಮುಖ್ಯ ಆಕರ್ಷಣೆಯೆಂದರೆ ಕುದುರೆಗಳು. ಕುದುರೆಗಳನ್ನು ಬಹುಪಯೋಗಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಎಷ್ಟರ ಮಟ್ಟಿಗೆ ಇವು ತಯಾರಿಯಾಗಿವೆ ಅಂದರೆ, ಗದ್ದೆ ಉಳುವ ಕೆಲಸಗಳಿಗೆ ಸಹಿತ ಇವು ರೆಡಿ ಇರುತ್ತವೆ. ಕುದುರೆಗಳ ಮುಖಾಂತರ ಈ ಸಲದ ಗದ್ದೆ ಉಳುವ ಕೆಲಸವನ್ನೂ ಮಾಡಲಾಗಿದೆ. ಸಾಮಾನ್ಯ ಕೋಣಗಳಿಗಿಂತ ದುಪ್ಪಟ್ಟು ವೇಗವಾಗಿ ಗದ್ದೆಯನ್ನು ಉಳುತ್ತವೆ ಈ ಕುದುರೆಗಳು. ಅದೇ ರೀತಿ ಕಬ್ಬಿನ ಆಲೆಮನೆಯಲ್ಲೂ ಇವು ಮೈಮುರಿದು ಕೆಲಸ ಮಾಡುತ್ತವೆ.
ಹವ್ಯಾಸಕ್ಕಾಗಿ ಪ್ರಾಣಿಗಳನ್ನು ಸಾಕಿದರೂ ಕೂಡ ದಿನಕ್ಕೆ ಸುಮಾರು 500 ರೂಪಾಯಿಗಳಷ್ಟು ಖರ್ಚನ್ನು ಅವುಗಳಿಗೋಸ್ಕರ ವ್ಯಯಿಸಲಾಗುತ್ತಿದೆ. ಪ್ರಾಣಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅವುಗಳನ್ನು ಸಾಕುವ ಹವ್ಯಾಸವನ್ನು ಮುಂದುವರೆಸಿಕೊಂಡು ಬಂದ ಗೋಪಾಲಭಟ್ ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.