ಕಾರವಾರ : ಸಾಮಾನ್ಯವಾಗಿ ಪೊಲೀಸರು ಪತ್ತೆ ಕಾರ್ಯದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಆದರೆ, ಇದೀಗ ಶಿಕ್ಷಕರು ಕೂಡ ಪೊಲೀಸರಂತೆ ಪತ್ತೆದಾರಿ ಕಾರ್ಯ ಮಾಡುವ ಸಂದರ್ಭ ಎದುರಾಗಿದೆ. ಈ ಬಾರಿ SSLC ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಇದುವರೆಗೆ ಶಾಲೆಗಳ ಮತ್ತು ಶಿಕ್ಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ, ಇಂತಹ ವಿದ್ಯಾರ್ಥಿಗಳನ್ನು ಹುಡುಕಿ ತರುವ ಜವಾಬ್ದಾರಿ ಇದೀಗ ಶಿಕ್ಷಕರ ಹೆಗಲಿಗೇರಿದೆ.
ಹೌದು, ಅಂತೂ ಇಂತೂ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ. ಕೋವಿಡ್ ಮಹಾಮಾರಿಯಿಂದಾಗಿ ಕೆಲ ತಿಂಗಳು ಶಾಲೆಗಳು ಮುಚ್ದಿದ್ದರಿಂದ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಂದ ದೂರ ಉಳಿದಿದ್ದಾರೆ. ಇಂಥ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸುವುದು ಕೂಡ ಸವಾಲಿನ ಕೆಲಸವಾಗಿದೆ.
ಆದರೆ, ಉತ್ತರಕನ್ನಡ ಜಿಲ್ಲೆಯ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಕೆಲ ಮಕ್ಕಳು-ಶಿಕ್ಷಕರ ನಡುವಿನ ಸಂಪರ್ಕ ವಿವಿಧ ಕಾರಣಗಳಿಂದ ಕಡಿತಗೊಂಡಿದೆ.
ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ನೆಟ್ ವರ್ಕ್ ಸಮಸ್ಯೆ ಜೊತೆಗೆ ಬಸ್ ಸಂಪರ್ಕವೂ ಇಲ್ಲದೆ ಅನೇಕ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಕುಗ್ರಾಮಗಳಿಂದ ಮಕ್ಕಳನ್ನು ಹುಡುಕೋದೆ ಅವರಿಗೆ ದೊಡ್ಡ ಸವಾಲಾಗಿದೆ. ಈ ಸಲ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎರಡೇ ದಿನ ಮಾಡುವುದರಿಂದ ಪರೀಕ್ಷೆ ಬರೆದ ಪ್ರತಿಯೊಬ್ಬರೂ ಉತ್ತೀರ್ಣರಾಗಲಿದ್ದಾರೆಂದು ಇಲಾಖೆ ತಿಳಿಸಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಮಕ್ಕಳಿಗೆ ಕೊಟ್ಟು ಅಭ್ಯಾಸ ಮಾಡಿಸುವಂತೆ ಆಯಾ ಶಾಲೆಗಳಿಗೆ ಸೂಚಿಸಲಾಗಿದೆ.
ಓದಿ : ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಗಸೂಚಿ ಬಿಡುಗಡೆ; ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವಂತಿಲ್ಲ
ಹೀಗಾಗಿ, ಶಿಕ್ಷಕರು ಮಕ್ಕಳ ಸಂಪರ್ಕಕ್ಕಾಗಿ ಹರಸಾಹಸಡುತ್ತಿದ್ದಾರೆ. ಕಳೆದ ವಾರ ಶಿಕ್ಷಕರ ಸಭೆಯಲ್ಲಿ ಅಧಿಕಾರಿಗಳು ಮಕ್ಕಳನ್ನು ಸಂಪರ್ಕ ಮಾಡುವಂತೆ ಸೂಚಿಸಿದ್ದು, ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಾರೆ ಶಿಕ್ಷಕರು.
ಕೆಲ ದಿನಗಳ ಹಿಂದೆ ಆಯಾ ಶಿಕ್ಷಣಾಧಿಕಾರಿಗಳು ಹೈಸ್ಕೂಲ್ ಮುಖ್ಯ ಶಿಕ್ಷಕರ ಸಭೆ ನಡೆಸಿದ್ದರು. ಆಗ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 83 ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಇದುವರೆಗೂ ಶಾಲೆಗಳ ಅಥವಾ ಶಿಕ್ಷಕರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗ್ತಿದೆ. ಇದು ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳನ್ನು ಹುಡುಕಿ ತರುವ ಜವಾಬ್ದಾರಿಯನ್ನು ಹೈಸ್ಕೂಲ್ ಶಿಕ್ಷಕರಿಗೆ ನೀಡಲಾಗಿದೆ.
ತಮ್ಮ ಶಾಲೆಯ ಎಲ್ಲಾ ಮಕ್ಕಳನ್ನು ಹೇಗಾದರೂ ಸಂಪರ್ಕಿಸಿ ಅವರಿಗೆ ಪಾಠ ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ಹೊತ್ತುಕೊಂಡಿದ್ದಾರೆ. ಬೈಕ್ ಮೂಲಕ ವಿಳಾಸ ಹಿಡಿದು ವಿದ್ಯಾರ್ಥಿಗಳ ಮನೆಗಳನ್ನು ಹುಡುಕುತ್ತಿದ್ದಾರೆ. ನಗರ ಪ್ರದೇಶದ ಮಕ್ಕಳು ಈಗಾಗಲೇ ಶಿಕ್ಷಕರ ಸಂಪರ್ಕದಲ್ಲಿದ್ದು, ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡು ಆನ್‌ಲೈನ್ ತರಗತಿ ಪಡೆಯುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಕರೆ ಮಾಡಿ ಓದಲು ಪ್ರೇರೇಪಿಸುತ್ತಿದ್ದಾರೆ.
ಆದರೆ, ಗ್ರಾಮೀಣ ಭಾಗದ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿರುವ ಹಾಗೂ ಮೊಬೈಲ್ ಇಲ್ಲದ ಮಕ್ಕಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ವಿಳಾಸ ಹುಡುಕಿ ಮನೆಗಳಿಗೆ ತೆರಳಿ ಅವರನ್ನು ಪತ್ತೆ ಮಾಡೋದೇ ದೊಡ್ಡ ಕೆಲಸವಾಗಿದೆ. ಹೇಗಾದ್ರು ಮಾಡಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಉತ್ತೇಜಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಕೇವಲ ನೆಟ್‌ವರ್ಕ್ ಸಮಸ್ಯೆ ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗದಿಂದ ಜಿಲ್ಲೆಗೆ ಬಂದು ನೆಲೆಸಿದ್ದ ಸಾಕಷ್ಟು ಕುಟುಂಬಗಳು ಕೋವಿಡ್ ಲಾಕ್‌ಡೌನ್ ಹಾಗೂ ಆರ್ಥಿಕ ಸಂಕಷ್ಟದಿಂದ ತಮ್ಮ ಸ್ವಂತ ಊರು ತಲುಪಿವೆ. ಅಂತಹ ಹಲವು ಪಾಲಕರ ಬಳಿ ಮೊಬೈಲ್ ಸಹ ಇಲ್ಲ. ಇನ್ನೂ ಕೆಲವು ಮಕ್ಕಳು ಕೂಲಿ ಕೆಲಸಕ್ಕೆ ತೆರಳುತ್ತಿರುವ ವಿಷಯವನ್ನು ಶಿಕ್ಷಕರು ತಿಳಿದುಕೊಂಡಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ಮಹಾಮಾರಿಯಿಂದಾಗಿ ವಿದ್ಯಾರ್ಥಿಗಳು ಊರು ಸೇರಿಕೊಂಡು ಸಂಪರ್ಕಕ್ಕೆ ಸಿಗದಂತಾಗಿದ್ದು, ಇತ್ತ ಶಿಕ್ಷಕರು ಮಾತ್ರ ಮಕ್ಕಳ ಪತ್ತೆಗೆ ಊರೂರು ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.