ಕಾರವಾರ: ಲಾಕ್ಡೌನ್ ನಡುವೆಯೂ ತೈಲ ಸಂಗ್ರಹಗಾರ ಘಟಕ ತೆರೆದಿರುವುದಕ್ಕೆ ಸ್ಥಳೀಯರು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಬೈತಖೋಲ್ ಬಂದರು ಬಳಿ ನಡೆದಿದೆ. ಐಎಂಸಿ ಹಾಗೂ ರಿಲಯನ್ಸ್ ಕಂಪನಿಗಳು ತೈಲ ಸಂಗ್ರಹಗಾರ ಘಟಕಗಳನ್ನು ತೆರೆದ ಪರಿಣಾಮ ಲಾರಿಗಳ ಸಂಚಾರ ಹೆಚ್ಚಾಗಿದೆ.
ಆದರೆ, ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಮನೆ ಮಂದಿಯೆಲ್ಲ ಮನೆಯಲ್ಲಿರುವಾಗ ಎಲ್ಲಿಂದಲೋ ಬಂದಿರುವ ಕಾರ್ಮಿಕರು, ಲಾರಿ ಚಾಲಕರು ಇಲ್ಲಿ ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೇ ಅಡ್ಡಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಟ್ಯಾಂಕರ್ಗಳು ಹೊರ ರಾಜ್ಯಗಳಿಂದ ಬರುತ್ತಿವೆ. ಈಗಾಗಲೇ ಸಾಕಷ್ಟು ಕಡೆ ಕೊರೊನಾ ವೈರಸ್ ಪ್ರಕರಗಳು ಪತ್ತೆಯಾಗಿವೆ. ಆದರೆ, ಕಾರ್ಮಿಕರಿಗೆ, ಚಾಲಕರಿಗೆ ಯಾವುದೇ ವೈದ್ಯಕೀಯ ತಪಾಸಣೆ ನಡೆಸದೆ, ಸುರಕ್ಷತಾ ಕ್ರಮ ಕೈಗೊಳ್ಳದೇ ಬಿಟ್ಟುಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.