ಕಾರವಾರ: ಕುಮಟಾ ತಾಲೂಕಿನ ತಂಡ್ರಕುಳಿ ಗ್ರಾಮಸ್ಥರಿಗೆ ಒಂದೆಡೆ ಗ್ರಾಮದ ಕೆಳಗೆ ಹರಿಯುವ ನದಿ ಉಕ್ಕುವ ಆತಂಕವಾದರೆ, ಇನ್ನೊಂದೆಡೆ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಯಾವ ಸಮಯದಲ್ಲಾದರೂ ನಾವು ಮಣ್ಣು ಪಾಲಾಗಬಹುದು ಎಂಬ ಭಯದಲ್ಲಿ ಬದುಕುವಂತಾಗಿದೆ ಇಲ್ಲಿನ ಜನರ ಪರಿಸ್ಥಿತಿ.
ತಂಡಕುಳಿ ಗ್ರಾಮಸ್ಥರಿಗೆ ಒಂದೆಡೆ ಮಳೆಯ ಅಬ್ಬರದಿಂದ ಊರಿನ ಪಕ್ಕದಲ್ಲಿರುವ ನದಿ ತುಂಬಿಕೊಳ್ಳಲು ಪ್ರಾರಂಭಿಸಿದ್ದು, ಇನ್ನೊಂದೆಡೆ ಗ್ರಾಮದ ಮನೆಗಳಿಗೆ ಹೊಂದಿಕೊಂಡಿರುವ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ಗುಡ್ಡವನ್ನ ಕೊರೆದು ರಸ್ತೆ ಅಗಲೀಕರಣ ಕಾಮಗಾರಿ ನಡೆಸಿರುವುದು ಗುಡ್ಡ ಕುಸಿಯುವ ಆತಂಕವನ್ನ ಸೃಷ್ಟಿಸಿದೆ. 2017ರಲ್ಲಿ ಈ ಪ್ರದೇಶದಲ್ಲಿ ಉಂಟಾದ ಗುಡ್ಡ ಕುಸಿತದಿಂದ ಮೂವರು ಮಕ್ಕಳು ಸಾವನ್ನಪ್ಪಿದ ದುರಂತ ಇನ್ನೂ ಈ ಗ್ರಾಮಸ್ಥರನ್ನು ಕಾಡುತ್ತಿದೆ. ಈ ದುರ್ಘಟನೆ ಸಂಭವಿಸಿದ ಬಳಿಕ ಗುಡ್ಡಕ್ಕೆ ಪ್ಲಾಸ್ಟರಿಂಗ್ ಕಾರ್ಯ ಮಾಡಿದ್ದರೂ ಸಹ ಅದು ಅಸಮರ್ಪಕವಾಗಿದ್ದು, ಗುಡ್ಡ ಕುಸಿತ ಮಾತ್ರ ನಿಲ್ಲದಿರುವುದು ಇಲ್ಲಿನ ಜನರನ್ನು ಇನ್ನಷ್ಟು ಭಯಭೀತರನ್ನಾಗಿಸಿದೆ.
ಈ ಗ್ರಾಮದಲ್ಲಿ ಸುಮಾರು 50 ಕುಟುಂಬಗಳು ವಾಸವಾಗಿದ್ದು, ಬಹುತೇಕರು ಕೃಷಿ ಹಾಗೂ ಮೀನುಗಾರಿಕೆಯನ್ನೇ ಜೀವನಾಧಾರವಾಗಿ ಅವಲಂಬಿಸಿದ್ದಾರೆ. ಕರಾವಳಿಯಲ್ಲಿ ಕಳೆದ 15 ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಕೆಲ ದಿನಗಳ ಹಿಂದೆ ಈ ಗ್ರಾಮದ ಸಮೀಪದಲ್ಲೇ ಮತ್ತೊಂದು ಕಡೆ ಗುಡ್ಡ ಕುಸಿತ ಉಂಟಾಗಿದೆ. ಪ್ರತಿವರ್ಷ ಇದೇ ರೀತಿ ಪರಿಸ್ಥಿತಿಯನ್ನ ಗ್ರಾಮಸ್ಥರು ಎದುರಿಸುತ್ತಾ ಬಂದಿದ್ದರೂ ಸಹ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರವನ್ನ ಒದಗಿಸುವಲ್ಲಿ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಬೇಸರವಾಗಿದೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮತ್ತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಮತ್ತೆ ಮಳೆ ಹೆಚ್ಚಾದಲ್ಲಿ ಮತ್ತಷ್ಟು ಕಡೆಗಳಲ್ಲಿ ಗುಡ್ಡ ಕುಸಿಯುವ ಆತಂಕವಿದೆ ಎಂಬುದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಾಗಿ ಗ್ರಾಮದ ಜನರು ಸಂಕಷ್ಟ ಎದುರಿಸುವಂತಾಗಿದ್ದು, ಪುನಃ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಜನರ ಆಗ್ರಹವಾಗಿದೆ.