ಶಿರಸಿ: ರಾಜ್ಯದಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ಗಳಿಗೆ ಚುನಾವಣೆ ಸನಿಹದಲ್ಲಿದೆ. ಈ ಸಮಯದಲ್ಲಿ ತಾಲೂಕು ಪಂಚಾಯತ್ಗೆ ಚುನಾವಣೆ ಬೇಕೇ? ಅನ್ನೋ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಇದಕ್ಕೆ ಕಾರಣ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ನೀಡಿದ 'ತಾಲೂಕು ಪಂಚಾಯತ್ ವಿಸರ್ಜನೆ ಬಗ್ಗೆ ಚಿಂತನೆ ನಡೆದಿದೆ' ಎಂಬ ಹೇಳಿಕೆ.
ಜಿಲ್ಲೆಯ ಮುತ್ಸದ್ಧಿ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತಂದಿದ್ದರು. ಆಗ ಕೇವಲ ಮಂಡಲ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗಳ 2 ಹಂತದ ಪಂಚಾಯತ್‌ಗಳು ಜಾರಿಯಲ್ಲಿದ್ದವು.
ಆದ್ರೆ 1993-94 ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 3 ಹಂತದ ಪಂಚಾಯತ್ಗಳನ್ನಾಗಿ ವಿಭಾಗಿಸಿತು. ತಾಲೂಕು ಪಂಚಾಯತ್ಗಳಿಗೂ ಕೂಡ ಜನಪ್ರತಿನಿಧಿಗಳನ್ನು ಆಯ್ಕೆ ಮಾಡೋ ಮೂಲಕ ಅದನ್ನು ಕೂಡ ಎಲೆಕ್ಟೆಡ್ ಜನರಲ್ ಬಾಡಿಯನ್ನಾಗಿ ಪರಿವರ್ತಿಸಲಾಯ್ತು.
ಆದ್ರೆ ಉಳಿದೆರಡು ಹಂತದ ಪಂಚಾಯತ್ಗಳಿಗೆ ಬರುವ ಅನುದಾನದ ಅರ್ಧದಷ್ಟು ಅನುದಾನ ಕೂಡ ತಾಲೂಕು ಪಂಚಾಯತ್ಗೆ ಬರುತ್ತಿಲ್ಲ. ಆದ್ದರಿಂದ ತಾಲೂಕು ಪಂಚಾಯತ್ಗೆ ಚುನಾಯಿತ ಜನ ಪ್ರತಿನಿಧಿಗಳ ಅವಶ್ಯಕತೆ ಇಲ್ಲ ಎನ್ನುವುದು ಹಲವರ ಅಭಿಪ್ರಾಯ.
ಶಾಸಕರಿಗೆ ಅವರದ್ದೇ ಆದ ವ್ಯಾಪ್ತಿ ಇರೋದ್ರಿಂದ ಪ್ರತಿ ತಾಲೂಕನ್ನು ನೋಡಿಕೊಳ್ಳೋ ಜವಾಬ್ದಾರಿ ಅವರಿಗೆ ಹೊರೆಯಾಗುತ್ತದೆ. ತಾಲೂಕುಗಳ ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳ ಜೊತೆ ಕೆಲಸ ಮಾಡಿಸಿಕೊಂಡು ಹೋಗುವ ಜವಾಬ್ದಾರಿಯನ್ನು ತಾಲೂಕು ಪಂಚಾಯತ್ ಜನಪ್ರತಿನಿಧಿಗಳು ಮಾಡ್ತಾರೆ. ಆದ್ದರಿಂದ ತಾಲೂಕು ಪಂಚಾಯತ್ಗೆ ಪ್ರತ್ಯೇಕ ಅನುದಾನ ನೀಡಿ ಬಲಪಡಿಸಬೇಕಿದೆ ಅಂತಾರೆ ತಾಲೂಕು ಪಂಚಾಯತ್ ಸದಸ್ಯರು.