ಕಾರವಾರ: ತಾಲೂಕಿನ ಮುದಗಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರೊಬ್ಬರಿಗೆ ಬಾಲವಿಲ್ಲದ ವಿಚಿತ್ರ ಆಕಾರದ ಮೀನೊಂದು ಪತ್ತೆಯಾಗಿದೆ.
ಸ್ಥಳೀಯರಿಗೆ ಮೀನಿನ ಹೆಸರು ಗೊತ್ತಿಲ್ಲ. ಮೀನುಗಾರಿಕೆಗೆ ತೆರಳಿದಾಗ ಬಲೆಗೆ ಈ ಮೀನು ಬಿದ್ದಿದ್ದು, ಬಾಲವಿಲ್ಲದ ಮೀನನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಕೊನೆಗೆ ದಡಕ್ಕೆ ತಂದು ನೋಡಿದ ಕೆಲವರು, ಈ ಹಿಂದೆಯೂ ಒಮ್ಮೆ ಇಂತಹ ಮೀನು ಸಿಕ್ಕಿತ್ತು. ಅದರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ ಎನ್ನುತ್ತಾರೆ ಮೀನುಗಾರರು.
ಮೀನಿನ ವೈಜ್ಞಾನಿಕ ಹೆಸರು ಮೊಲಾ ಮೊಲಾ'. ಓಶಿಯನ್ ಸನ್ ಫಿಶ್, ಕಾಮನ್ಮೊಲಾ ಮತ್ತು ಕಾಮನ್ ಸನ್ ಫಿಶ್ ಎನ್ನಲಾಗಿದೆ. ಇನ್ನು ಹೆಚ್ಚು ಮೂಳೆಯನ್ನೇ ಹೊಂದಿರುವುದರಿಂದ ಬೊನಿ ಫೀಶ್ ಎಂದೂ ಕೂಡ ಕರೆಯಲಾಗುತ್ತದೆ.
ಇತರ ಮೀನುಗಳಿಗೆ ಇರುವಂತೆ ಇದಕ್ಕೆ ಬಾಲವಿರುವುದಿಲ್ಲ. ಮೀನಿನ ಮೇಲ್ಮೈ ಮತ್ತು ಗುದದ ರೆಕ್ಕೆಗಳ ಸಮ್ಮಿಲನದಿಂದ ರಚನೆಯಾಗಿರುವ ಮಾಂಸದ ಮುದ್ದೆ ಬಾಲದ ಜಾಗದಲ್ಲಿರುತ್ತದೆ. ಸಾಮಾನ್ಯವಾಗಿ 6ರಿಂದ 10 ಅಡಿ ಉದ್ದ ಬೆಳೆಯುವ ಈ ಮೀನುಗಳು, ಸುಮಾರು 900 ಕೆಜಿವರೆಗೂ ತೂಗುತ್ತವೆ. ದೇಹಕ್ಕೆ ಶಾಖ ಪಡೆದುಕೊಳ್ಳಲು ಸಮುದ್ರದಲ್ಲಿ ಸೂರ್ಯ ಕಿರಣಗಳು ಹಾಯುವವರೆಗಿನ ನೀರಿನಲ್ಲಿ ಸಂಚರಿಸುತ್ತಿರುತ್ತವೆ. ಇದೇ ಕಾರಣಕ್ಕಾಗಿ ಇದಕ್ಕೆ ಸನ್ಫಿಶ್ ಎನ್ನುವ ಹೆಸರು ಬಂದಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.