ಕಾರವಾರ: ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಜನರ ಪಾಲಿಗೆ ನುಂಗಲಾರದ ತುತ್ತಾಗಿದೆ. ಹೈಕೋರ್ಟ್ ಗ್ರೀನ್ ಸಿಗ್ನಲ್ ಬಳಿಕ ಅಧಿಕಾರಿಗಳು ಕಾಮಗಾರಿ ನಡೆಸಲು ಸಕಲ ಸಿದ್ಧತೆ ನಡೆಸಿದ್ದು, ಇನ್ನೇನು ಬಂದರು ವಿಸ್ತರಣೆ ಪ್ರಾರಂಭವಾಗಲಿದೆ ಎನ್ನುವಂತಾಗಿತ್ತು. ಆದರೆ, ಇದರಿಂದ ಆತಂಕಗೊಂಡಿದ್ದ ಸ್ಥಳೀಯರಿಗೆ ಇದೀಗ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ಸೂಚನೆ ಕೊಂಚ ನೆಮ್ಮದಿ ನೀಡಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಸಾಗರಮಾಲಾ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಿದ್ಧವಾಗಿರುವ ಯೋಜನೆ ಜಾರಿಗೆ ಕಳೆದ ಹಲವು ವರ್ಷಗಳಿಂದ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ.
ಆದರೆ, ಇದಕ್ಕೆ ಮೀನುಗಾರರು ಸೇರಿದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಯೋಜನೆ ಕಾಮಗಾರಿ ಪ್ರಾರಂಭಿಸದಂತೆ ಬೈತ್‌ಕೋಲ್ ಬಂದರು ನಿರಾಶ್ರಿತರಾದ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘವು ನ್ಯಾಯಾಲಯದ ಮೆಟ್ಟಿಲೇರಿತ್ತಾದರೂ ಕಾಮಗಾರಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿತ್ತು.
ಈ ಹಿನ್ನೆಲೆಯಲ್ಲಿ ಬೈತಖೋಲ್ ಬಂದರು ವ್ಯಾಪ್ತಿಯಲ್ಲಿ ಕಾಮಗಾರಿಗೆ ಇಲಾಖೆ ಸಕಲ ಸಿದ್ಧತೆ ನಡೆಸಿತ್ತು. ಬಂದರು ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿ ನಡೆಸಲು ಈಗಾಗಲೇ ಡ್ರೆಜ್ಜಿಂಗ್ ಹಡಗುಗಳು ಸಹ ಆಗಮಿಸಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈ ನಡುವೆ ಪ್ರಕರಣದ ಕುರಿತು ತನಿಖೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಕಾಮಗಾರಿ ಆರಂಭಿಸದಂತೆ ಮೌಖಿಕವಾಗಿ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಯೋಜನೆ ವಿರುದ್ಧ ಅರ್ಜಿದಾರರ ಪರ ಸ್ಥಳೀಯರಾದ ಸುಪ್ರೀಂಕೋರ್ಟ್ ಹಿರಿಯ ವಕೀಲ ದೇವದತ್ತ ಕಾಮತ್ ವಾದ ಮಂಡಿಸಿದ್ದರು.
2ನೇ ಹಂತದ ಅಭಿವೃದ್ಧಿ ಯೋಜನೆಗೆ ಅನುಮತಿ ನೀಡಲು ರಾಜ್ಯಮಟ್ಟದ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಯೋಜನೆಯು ವರ್ಗ ಎ ಮತ್ತು ಎಲ್ಲ ಯೋಜನೆಗಳು ಈ ವರ್ಗದಲ್ಲಿ ಸೇರಿಸಲಾದ ಅಸ್ತಿತ್ವದಲ್ಲಿರುವ ಯೋಜನೆಗಳ ವಿಸ್ತರಣೆ ಮತ್ತು ಆಧುನೀಕರಣ ಸೇರಿ ಇತರ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದಿಂದ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಪೂರ್ವ ಪರಿಸರ ಅನುಮತಿ ಅಗತ್ಯವಿರುತ್ತದೆ. ಆದ್ದರಿಂದ ಕರ್ನಾಟಕ ಸರ್ಕಾರ ನೀಡಿದ ಯೋಜನಾ ಅನುಮತಿ ಕಾನೂನುಬಾಹಿರವಾಗಿದೆ ಎಂದಿದ್ದರು.
ಬಂದರು ವಿಸ್ತರಣೆಯಿಂದ ಕಾರವಾರಿಗರಿಗೆ ಇರುವ ಏಕೈಕ ಕಡಲ ತೀರಾ ಹಾಗೂ ಪರಿಸರವು ನಾಶವಾಗಲಿದೆ. ಜನಸಾಮಾನ್ಯರು ಪ್ರಕೃತಿದತ್ತವಾಗಿ ದೊರೆಯುವ ಸವಲತ್ತಿನಿಂದ ವಂಚಿತರಾಗಲಿದ್ದಾರೆ. ಮೀನುಗಾರರ ಬದುಕು ಬೀದಿ ಪಾಲಾಗಲಿದೆ ಎಂದು ದೇವದತ್ತ ಕಾಮತ್ ಮಂಡಿಸಿದ ವಾದದಿಂದಾಗಿ ಸದ್ಯ ತಾತ್ಕಾಲಿಕ ಗೆಲುವು ಸಿಕ್ಕಿದೆ. ಹೀಗಾಗಿ ಈ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು. ಬಂದರು ಇಲಾಖೆ ಈಗಾಗಲೇ ಕಾಮಗಾರಿ ನಡೆಸಲು ಸಿದ್ಧತೆ ನಡೆಸಿದ್ದು, ಇದನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದ ಬಳಿ ಲಾರಿ - ಆಟೋ ನಡುವೆ ಅಪಘಾತ: ಅಂತ್ಯ ಸಂಸ್ಕಾರಕ್ಕೆ ಹೊರಟಿದ್ದ ಮೂವರ ದುರ್ಮರಣ