ಕಾರವಾರ(ಉತ್ತರ ಕನ್ನಡ): ಪ್ರಚೋದನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣ ಆರೋಪಗಳಡಿ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 505 ಹಾಗೂ 153ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹೆಗಡೆ ಹೇಳಿದ್ದೇನು?: ಕುಮಟಾದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಹೆಗಡೆ, "ಕೆಲವರು ಜಾತಿ, ಭಾಷೆ, ಪ್ರಾದೇಶಿಕತೆ ಹಾಗು ಇತರ ಹೆಸರಿನಲ್ಲಿ ಸಮಾಜ ಒಡೆಯುತ್ತಿದ್ದಾರೆ. ಈಗಲೂ ಅದೇ ಕೆಲಸ ನಡೆಯುತ್ತಿದೆ. ಆದರೂ ಕೂಡ ಸಮಾಜ ಒಟ್ಟಿಗೆ ನಿಂತಿದೆ. ಹೀಗಾಗಿ ಈಗಿನ ಗೆಲುವನ್ನು ಮುಂದಿನ ಶತಮಾನದಲ್ಲೂ ನೆನೆಯುವಂತಿರಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವಂತೆ ಈ ಬಾರಿಯ ಗೆಲುವು ಮುಂದಿನ ದಿನಗಳಲ್ಲಿ ಅಳಿಸಲು ನಮ್ಮಿಂದಲೂ ಆಗಬಾರದು. ಗೆಲುವಿನ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು. ನಮ್ಮ ವಿರೋಧ ಕಾಂಗ್ರೆಸ್ ಅಲ್ಲ. ಆದರೆ, ನಮ್ಮ ವಿರೋಧಿ ಸಿದ್ದರಾಮಯ್ಯ" ಎಂದು ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಜಿಲ್ಲೆಯ ಕೆಲವು ಮಂದಿರ ಮಸೀದಿಗಳ ಕುರಿತು ಪ್ರಸ್ತಾಪಿಸಿ ಹೇಳಿಕೆ ನೀಡಿದ್ದರು.
ಭಾಷೆ ಸಂಸ್ಕೃತಿ ಬಿಂಬಿಸುತ್ತದೆ- ಸಿಎಂ: ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ನಲ್ಲಿ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, "ರಾಜಕೀಯ ಉದ್ದೇಶದಿಂದ ಉತ್ತರ ಕನ್ನಡ ಸಂಸದರಾದ ಅನಂತ ಕುಮಾರ್ ಹೆಗಡೆಯವರು ಬಳಸಿದ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಅವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವೇ'' ಎಂದು ಬರೆದಿದ್ದಾರೆ.
ಇದನ್ನೂ ಓದಿ: ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು