ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ವಿಶೇಷ ಆಚರಣೆಗಳಲ್ಲಿ ಹೋಳಿ ಸುಗ್ಗಿ ಕುಣಿತ ಸಹ ಒಂದು. ಹೋಳಿ ಸಮೀಪಿಸುತ್ತಿದ್ದಂತೆ ಎಲ್ಲಿ ನೋಡಿದರೂ ಬಗೆ ಬಗೆಯ ವೇಷಧಾರಿಗಳು, ಕೋಲಾಟ, ಗುಮಟೆ ಜಾಗಟೆ ಸದ್ದು ಜೊತಗೆ ಸಂಭ್ರಮವೂ ಮನೆಮಾಡಿರುತ್ತದೆ. ಈ ಬಾರಿ ಸಹ ಹೋಳಿ ಸುಗ್ಗಿ ಕುಣಿತಕ್ಕೆ ಚಾಲನೆ ನೀಡಲಾಗಿದೆ. ಕಳೆದ ಬಾರಿ ಕೋವಿಡ್ ಹಿನ್ನೆಲೆ ಸರಳವಾಗಿದ್ದ ಸುಗ್ಗಿ ಕುಣಿತವನ್ನು ಈ ಬಾರಿ ಅದ್ಧೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಹೋಳಿ ಹುಣ್ಣಿಮೆ ಹತ್ತಿರವಾದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಗ್ಗಿ ಸಂಭ್ರಮ ಶುರುವಾಗುತ್ತದೆ. ಜಿಲ್ಲೆಯಲ್ಲಿನ ಹಾಲಕ್ಕಿ, ಕೋಮಾರಪಂಥ, ಕರೆ ಒಕ್ಕಲಿಗ, ನಾಮಧಾರಿ, ಅಂಬಿಗ, ಆಗೇರ ಸೇರಿದಂತೆ ಅನೇಕ ಸಮಾಜದವರು ತಮ್ಮ ಸಾಂಪ್ರದಾಯಿಕ ಕಲೆಯಾದ ಸುಗ್ಗಿ ಕುಣಿತವನ್ನು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಾರಂಭಿಸುತ್ತಾರೆ.
ಹಬ್ಬಕ್ಕೂ ಏಳೆಂಟು ದಿನಗಳ ಮುನ್ನವೇ ಸುಗ್ಗಿ ಕುಣಿತ ಪ್ರಾರಂಭಿಸಿ ಊರೂರು ತಿರುಗಿ ತಮ್ಮ ಸಮಾಜದವರ ಮನೆಗೆ ತೆರಳಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಈ ಬಾರಿ ಸಹ ಕಾರವಾರ ತಾಲೂಕಿನ ಹಾಲಕ್ಕಿ ಗೌಡ ಸಮಾಜದ ಸುಗ್ಗಿ ಕುಣಿತಕ್ಕೆ ಚಾಲನೆ ಸಿಕ್ಕಿದ್ದು, ತಮ್ಮ ಸಮುದಾಯದವರು ಇರುವಲ್ಲಿಗೆ ತೆರಳಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಿದ್ದಾರೆ.
ತಾಲೂಕಿನ ಅಮದಳ್ಳಿ ಗ್ರಾಮದ ಕರಿ ದೇವರಿಗೆ ಪೂಜೆ ಮಾಡಿ ಹೊರಟಿರುವ ಸುಗ್ಗಿ ಕುಣಿತದ ತಂಡದವರು ಮನೆ ಮನೆಗೆ ತೆರಳಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದಾರೆ. ತಮ್ಮ ಜನಾಂಗದವರು ನೆಲೆಸಿರುವ ಮನೆಗಳತ್ತ ತೆರಳಿ ಸುಗ್ಗಿ ಕುಣಿತ ಮಾಡುವುದರಿಂದ ಜನರಿಗೆ ಎದುರಾಗಿರುವ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ಯಾವುದೇ ರೋಗಗಳೂ ಮನೆಯವರಿಗೆ ಬರದಂತೆ ತಡೆಯುತ್ತದೆ ಅನ್ನೋದು ಹಾಲಕ್ಕಿ ಸಮುದಾಯದವರ ನಂಬಿಕೆ.
ಇನ್ನು ಈ ಸುಗ್ಗಿ ಕುಣಿತಕ್ಕೆ ತನ್ನದೇ ಆದ ವಿಶೇಷವಿದೆ. ಇಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು, ತಲೆಗೆ ಬಣ್ಣ ಬಣ್ಣದ ತುರಾಯಿ ಪೇಟವನ್ನು ಕಟ್ಟಿ, ಪೊಗಡೆ ವೇಷಭೂಷಣ ಧರಿಸಿ ಸುಗ್ಗಿ ಕುಣಿಯುವುದು ಎಲ್ಲರ ಗಮನ ಸೆಳೆಯುತ್ತದೆ. ಇದರೊಂದಿಗೆ ವಾದ್ಯಗಳ ಸದ್ದು ಸುಗ್ಗಿ ಕುಣಿತಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಒಮ್ಮೆ ವೇಷತೊಟ್ಟು ಹಣೆಗೆ ಗಂಧವನ್ನು ಇಟ್ಟುಕೊಂಡು ಹೊರಟರೆ ಸುಗ್ಗಿ ಕುಣಿತ ಮುಗಿಸುವ ಏಳು ದಿನದವರೆಗೂ ವಾಪಸ್ ಮನೆಗೆ ತೆರಳುವಂತಿಲ್ಲ.
ಜೊತೆಗೆ ಸಮಾಜದ ಮನೆಯವರ ಅಂಗಳದಲ್ಲಿ ಸುಗ್ಗಿ ಕುಣಿತ ಮಾಡಿದಾಗ ಅವರು ನೀಡುವ ಹಣ, ಊಟ ತಿಂಡಿ ಸ್ವೀಕರಿಸುವ ಪ್ರತೀತಿ ಇದೆ. ಸಮುದಾಯದವರು ಇವರನ್ನು ಆಹ್ವಾನಿಸಿದಲ್ಲಿಗೆ ತೆರಳಿ ಕುಣಿತ ಪ್ರದರ್ಶಿಸಲಾಗುತ್ತದೆ. ಹೋಳಿ ದಿನದಂದು ಸುಗ್ಗಿ ಪ್ರಾರಂಭಿಸಿದಲ್ಲಿಗೆ ವಾಪಸ್ ಆಗಿ ಕರಿ ದೇವರಿಗೆ ಪೂಜೆ ಸಲ್ಲಿಸಿ, ತುರಾಯಿಗಳನ್ನ ದೇವರಿಗೆ ಅರ್ಪಿಸಿದ ಬಳಿಕವೇ ಸುಗ್ಗಿ ಕುಣಿತ ಕೊನೆಗೊಳಿಸಲಾಗುತ್ತದೆ ಅಂತಾರೆ ತಂಡದವರು.
ಇದನ್ನೂ ಓದಿ: ಶ್ರೀ ನಂದಿಕೇಶ್ವರ ಸ್ವಾಮಿ ಕುಂಭಾಭಿಷೇಕ: ವಿಶೇಷ ಪೂಜೆ ಸಲ್ಲಿಸಿದ ಸಿಎಂ
ಒಟ್ಟಿನಲ್ಲಿ ಜಾನಪದ ಕಲೆಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ತಲ ತಲಾಂತರಗಳಿಂದ ಬಂದಿರುವ ಸಾಂಪ್ರದಾಯಿಕ ಸುಗ್ಗಿ ಕುಣಿತದ ಕಲೆಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಮುಂದಿನ ಪೀಳಿಗೆಗೂ ಆಚರಣೆಗಳನ್ನು ತಿಳಿಸಿಕೊಡುವಲ್ಲಿ ಸುಗ್ಗಿ ಕುಣಿತ ಸಹಕಾರಿಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.