ಶಿರಸಿ: ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿರಸಿ ತಾಲೂಕಿನ ಸಹಸ್ರಳ್ಳಿಯಲ್ಲಿ ಘಟನೆ ನಡೆದಿದೆ.
ತಾಲೂಕಿನ ಯಡಳ್ಳಿ ಸಮೀಪದ ಸಹಸ್ರಳ್ಳಿಯ ಧನ್ಯಾ ಆಚಾರಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶಿರಸಿ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ಓದುತ್ತಿದ್ದು, ಪ್ರಥಮ ಶ್ರೇಯಾಂಕ ಬರಬೇಕು ಎಂಬ ಆಶಯವನ್ನು ಹೊಂದಿದ್ದಳು. ಆದರೆ, ಒಮ್ಮೆಲೆ ಕೊರೊನಾ ಕಾರಣದಿಂದ ಪರೀಕ್ಷೆ ರದ್ದಾಗಿ, ಪ್ರಥಮ ಪಿಯುಸಿ ಆಧಾರದ ಮೇಲೆ ಅಂಕ ನೀಡುವ ಘೋಷಣೆಯಿಂದ ಚಿಂತೆಯಲ್ಲಿದ್ದಳು.
ಪರೀಕ್ಷೆ ರದ್ದಾದ ಕಾರಣ ವರ್ಷಪೂರ್ತಿ ಓದಿದ್ದು ವ್ಯರ್ಥವಾಯಿತು ಎಂದು ಮನಸ್ಸಿಗೆ ಹಚ್ಚಿಕೊಂಡು ಶುಕ್ರವಾರ ಮಧ್ಯಾಹ್ನದ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.