ಶಿರಸಿ/ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ದಂಟ್ಕಲ್ ಮೂಲದವರಾದ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಮ್.ಎ.ಹೆಗಡೆ ದಂಟ್ಕಲ್ (74) ಇಂದು ಬೆಳಗ್ಗೆ ಬೆಂಗಳೂರಲ್ಲಿ ವಿಧಿವಶರಾಗಿದ್ದಾರೆ.
ಕಳೆದ 2 ವರ್ಷಗಳಿಂದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದಿಂದ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಕಳೆದ ಏ.13 ರಂದು ಅವರಿಗೆ ಕೋವಿಡ್ ದೃಢಪಟ್ಟಿತ್ತು. ಇದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನೆಲೆಸಿದ್ದ ಎಂ.ಎ.ಹೆಗಡೆ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿಸಿ ಜಬಿನ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಸಂಸ್ಕೃತದಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಇವರು, ಸಂಸ್ಕೃತ ಉಪನ್ಯಾಸಕರಾಗಿಯೂ ಸಹ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದರು.
ಸ್ವತಃ ಪಾತ್ರಧಾರಿಯು ಆಗಿದ್ದ ಎಂ.ಎ. ಹೆಗಡೆ, 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ಸೀತಾ ವಿಯೋಗ, ತ್ರಿಶಂಕು ಚರಿತೆ, ರಾಜಾ ಕಂದಾಮ ಮುಂತಾದವು ಅವರ ಜನಪ್ರಿಯ ಪ್ರಸಂಗಗಳಾಗಿವೆ. ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ ಚತು; ಸೂತ್ರ, ಮತ್ತು ಸಿದ್ಧಾಂತ ಬಿಂದು ಮುಂತಾದ ಗ್ರಂಥಗಳನ್ನು ಅವರು ರಚಿಸಿದ್ದರು.