ಶಿರಸಿ: ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಅಡವಿ ತುಡುವೆ ಜೇನಿನ ಸಂತತಿ ರಕ್ಷಣೆ ಮಾಡಲು ರಾಜ್ಯ ಸರ್ಕಾರ ತುಡುವಿ ಜೇನುಗಳನ್ನು ರಾಜ್ಯ ಕೀಟ ಎಂದು ಘೋಷಣೆ ಮಾಡಲು ಮುಂದಾಗಿದೆ. ಇದರಿಂದ ಅಡಗಿ ತುಡವಿ ಜೇನಿನ ಸಂತತಿಯ ರಕ್ಷಣೆ ಆಗಲಿದ್ದು, ಜೇನು ಕೃಷಿಗೆ ಹೆಚ್ಚಿನ ಒತ್ತು ಹಾಗೂ ಅಭಿವೃದ್ಧಿಯಾಗಲಿದೆ.
ಅಡವಿ ತುಡವಿ ಜೇನು ಹುಳವನ್ನು ಕರ್ನಾಟಕದ ರಾಜ್ಯ ಕೀಟ ಎಂದು ಘೋಷಿಸಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ತಜ್ಞರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶೇಷ ಶಿಫಾರಸು ಹಾಗೂ ಮನವಿಯನ್ನು ಸಲ್ಲಿಸಲಾಗಿದೆ. ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದ್ದು, ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನವಿಗೆ ಸ್ಪಂದಿಸಿದ್ದಾರೆ. ಇದರಿಂದ ತುಡವೆ ಜೇನಿಗೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ ಸಿಗಲಿದ್ದು, ಕಾಡಿನ ಜೇನು ಸಂಕುಲ ಉಳಿಯಲು ಹಾಗೂ ಜೇನು ಮರಗಳ ಸಂಖ್ಯೆ ಹೆಚ್ಚಲು ಸಹಕಾರಿಯಾಗಲಿದೆ.
ಅಡವೆ ತುಡವಿ ಜೇನಿನಿಂದ ಕಾಡಿನಲ್ಲಿ ಪರಾಗಸ್ಪರ್ಷ ಹೆಚ್ಚಾಗುತ್ತದೆ. ಇದರಿಂದ ಅರಣ್ಯ ಅಭಿವೃದ್ಧಿ ಸಾಧ್ಯ. ಅಲ್ಲದೆ ರೈತರು ಜೇನು ಸಾಕಣೆ ಮಾಡಿದರೆ ತಮ್ಮ ಕೃಷಿ ಉತ್ಪನ್ನ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದ್ದು, ಜೇನು ಕೃಷಿಯಿಂದ ಆದಾಯ ಬರುತ್ತದೆ. ಅಡವಿ ಜೇನಿಗೆ ರಾಜ್ಯ ಸ್ಥಾನಮಾನ ಸಿಕ್ಕಿದಲ್ಲಿ ಹೆಚ್ಚಿನ ಅನುದಾನವೂ ಬರಲಿದ್ದು, ಜೇನು ಕೃಷಿಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ. ಮಲೆನಾಡು ಭಾಗದಲ್ಲಿ ಜೇನು ಕೃಷಿಯನ್ನು ಆರ್ಥಿಕ ಶಕ್ತಿಯಾಗಿ ನಂಬಿಕೊಂಡಿದ್ದು, ಸರ್ಕಾರದ ಈ ಘೋಷಣೆಯಿಂದ ಕೃಷಿಕರಿಗೆ ಶಕ್ತಿ ತುಂಬಿದಂತಾಗಲಿದೆ.