ಭಟ್ಕಳ: ಕ್ಯಾಂಪ್ಕೋ ಸಂಸ್ಥೆಯು ರೈತರಿಂದ ನೇರ ಖರೀದಿ ಮಾಡುವುದರಿಂದ ಲಾಭ ರೈತರಿಗೇ ದೊರೆಯಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಕಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ಶಿರಸಿ ಹೇಳಿದರು.
ಮಾಧ್ಯಮಗಳೊಂದೊಗೆ ಮಾತನಾಡಿದ ಅವರು, ಕೇರಳ ಹಾಗೂ ಕರ್ನಾಟಕದ ರೈತರು ಸೇರಿ ಹುಟ್ಟು ಹಾಕಿದ ಕ್ಯಾಂಪ್ಕೋ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಇದರಲ್ಲಿ ಒಟ್ಟು 16 ನಿರ್ದೇಶಕರಿದ್ದು ಕೇರಳದಿಂದ 8 ಮಂದಿ ಹಾಗು ಕರ್ನಾಟಕದ 8 ಜನ ನಿರ್ದೇಶಕರಿದ್ದಾರೆ. 189 ಸ್ಥಳಗಳ ಖರೀದಿ ಕೇಂದ್ರಗಳಿಂದ ಒಟ್ಟು 1.25 ಲಕ್ಷ ಶೇರುದಾರರಿದ್ದಾರೆ ಎಂದರು.
ಭಟ್ಕಳದ ಜನತೆಗೆ ಅಡಿಕೆ, ಕಾಳು ಮೆಣಸು, ಕೋಕೋ ಮಾರಾಟ ಮಾಡಲು ದೂರದ ಕುಂದಾಪುರ ಇಲ್ಲವೇ ಕುಮಟಾಕ್ಕೆ ಹೋಗಬೇಕಾಗಿದ್ದರಿಂದ ತೊಂದರೆಯಾಗುತ್ತಿರುವುದನ್ನು ಮನಗಂಡು, ಶಿರಾಲಿಯಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ಫೆಬ್ರವರಿ 17ರಂದು ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಶಿರಾಲಿಯ ಎ.ಪಿ.ಎಂ.ಸಿ. ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಉದ್ಘಾಟನೆ ಗೊಳ್ಳಲಿದೆ ಎಂದರು.