ಭಟ್ಕಳ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿಗೆ ಕೋರಿ ಉತ್ತರ ಕನ್ನಡ ಶ್ರೀರಾಮ ಸೇನೆ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಇಂದು ಮನವಿ ಸಲ್ಲಿಸಲಾಯಿತು.
ಸ್ವಾತಂತ್ರ್ಯ ಸಂಗ್ರಾಮ ನೇತಾರ ಶ್ರೀ ಬಾಲಗಂಗಾಧರ ತಿಲಕ ಅವರು ಇಡೀ ದೇಶವನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಮನೆಯಲ್ಲಿದ್ದ ಶ್ರೀ ಗಣೇಶನನ್ನು ಸಾರ್ವಜನಿಕಗೊಳಿಸಿ ಜಾತಿ, ಪ್ರಾಂತ್ಯ, ಭಾಷೆ, ಪಕ್ಷ ಮರೆತು ಏಕತೆಯ ಸೂತ್ರದಲ್ಲಿ ಪೋಣಿಸಿದರು. 125 ವರ್ಷಗಳಿಂದ ಈ ಸಂಪ್ರದಾಯ ಮೂಲೆ ಮೂಲೆಗಳಲ್ಲಿ ಪಸರಿಸಿ ದೇಶ, ಧರ್ಮದ ರಕ್ಷಣೆಗೆ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ. ಅಲ್ಲದೆ, ಕಲಾವಿದರಿಗೆ, ಪ್ರತಿಭೆಗಳಿಗೆ, ಸಂಸ್ಕೃತಿಗೆ ವೇದಿಕೆಯಾಗಿದೆ. ಇಂತಹ ಸಾರ್ವಜನಿಕ ಉತ್ಸವಕ್ಕೆ ಈ ವರ್ಷ ತಮ್ಮ ಸರ್ಕಾರ ಕೋವಿಡ್- ಹಿನ್ನೆಲೆಯಲ್ಲಿ ಅನುಮತಿ ನೀಡದಿರುವುದು ಖಂಡನೀಯ ಎಂದರು.
ದೇಶದ ಜನತೆ ಕೋವಿಡ್ ವಿಷಯದಲ್ಲಿ ಜಾಗೃತರಿದ್ದು ನಿಯಮ ಮೀರಿ ವರ್ತಿಸುವುದಿಲ್ಲ ಎನ್ನುವುದು ನಮಗೆ ಗೊತ್ತಿದೆ. ಕೇವಲ ಕೋವಿಡ್ ನೆಪಕ್ಕೆ 125 ವರ್ಷಗಳ ಪರಂಪರೆ, ಧಾರ್ಮಿಕ ಭಾವನೆ, ಶ್ರದ್ಧೆ, ಏಕತೆಗೆ ಘಾಸಿಗೊಳಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ತಾವು ತಕ್ಷಣವೇ ಸುತ್ತೋಲೆ ಹೊರಡಿಸಿ ಸಾರ್ವಜನಿಕ ಗಣಪತಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತೇವೆ.
ದೇಶದ ತುರ್ತು ಪರಿಸ್ಥಿತಿಯಲ್ಲೂ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಘ್ನವಿರಲಿಲ್ಲ. ಈಗ್ಯಾಕೆ ನಿರ್ಬಂಧ? ಪಕ್ಕದ ಮಹಾರಾಷ್ಟ್ರದಲ್ಲಿ ಹೆಚ್ಚು ಕೋವಿಡ್ ಬಾಧಿತರಿದ್ದರೂ ಹಬ್ಬದಾಚರಣೆಗೆ ಅನುಮತಿ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಏಕೆ ಅನುಮತಿ ಸಿಗುತ್ತಿಲ್ಲ? ಬಾರ್, ಮಾಲ್, ಸಾರಿಗೆ, ದೇವಸ್ಥಾನ, ಮಸೀದಿ, ಚರ್ಚ್, ಜಿಮ್ ತೆರೆದು ಗಣೇಶೋತ್ಸವಕ್ಕೆ ಮಾತ್ರ ಏಕೆ ನಿರ್ಬಂಧ.? ಉತ್ಸವ ಅವಲಂಬಿಸಿ ಈಗಾಗಲೇ ಕೋಟ್ಯಂತರ ರೂ. ಬಂಡವಾಳ ಹಾಕಿ ವಿಗ್ರಹಗಳನ್ನು ತಯಾರಿಸಿದ ಕಲಾವಿದರ ಪರಿಸ್ಥಿತಿ ಸೇರಿದಂತೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಉತ್ಸವಕ್ಕೆ ಅನುಮತಿ ನೀಡಬೇಕೆಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯಂತ ನಾಯ್ಕ ಆಗ್ರಹಿಸಿದರು.